/ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝನ್ನು ಪ್ರಾರಂಭಿಸುವಾಗ ತಮ್ಮ ಎರಡು ಕೈಗಳನ್ನು ಹೆಗಲಿಗೆ ಸಮಾನಾಂತರವಾಗಿ ಎತ್ತುತ್ತಿದ್ದರು...

ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝನ್ನು ಪ್ರಾರಂಭಿಸುವಾಗ ತಮ್ಮ ಎರಡು ಕೈಗಳನ್ನು ಹೆಗಲಿಗೆ ಸಮಾನಾಂತರವಾಗಿ ಎತ್ತುತ್ತಿದ್ದರು...

ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝನ್ನು ಪ್ರಾರಂಭಿಸುವಾಗ ತಮ್ಮ ಎರಡು ಕೈಗಳನ್ನು ಹೆಗಲಿಗೆ ಸಮಾನಾಂತರವಾಗಿ ಎತ್ತುತ್ತಿದ್ದರು. ಅದೇ ರೀತಿ, ರುಕೂ ಮಾಡುವಾಗಲೂ, ರುಕೂವಿನಿಂದ ತಲೆ ಎತ್ತುವಾಗಲೂ ಕೈಗಳನ್ನು ಎತ್ತುತ್ತಿದ್ದರು ಮತ್ತು "ಸಮಿಅಲ್ಲಾಹು ಲಿಮನ್ ಹಮಿದ, ರಬ್ಬನಾ ವಲಕಲ್ ಹಮ್ದ್" ಎಂದು ಹೇಳುತ್ತಿದ್ದರು. ಆದರೆ ಸುಜೂದ್‌ನಲ್ಲಿ ಅವರು ಹೀಗೆ ಮಾಡುತ್ತಿರಲಿಲ್ಲ.
متفق عليه

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝ್ ಮಾಡುವಾಗ ಮೂರು ಸ್ಥಳಗಳಲ್ಲಿ ಕೈಗಳನ್ನು ಹೆಗಲಿಗೆ—ಅಂದರೆ ಭುಜ ಮತ್ತು ತೋಳಿನ ಮೇಲ್ಭಾಗದ ಎಲುಬು ಸೇರುವ ಸ್ಥಳ—ಸಮಾನಾಂತರವಾಗಿ ಎತ್ತುತ್ತಿದ್ದರು. ಮೊದಲನೆಯ ಸ್ಥಳ: ನಮಾಝ್ ಪ್ರಾರಂಭಿಸುವಾಗ ತಕ್ಬೀರತುಲ್-ಇಹ್ರಾಮ್ ಪಠಿಸುವ ಸಂದರ್ಭದಲ್ಲಿ. ಎರಡನೆಯದು: ರುಕೂ ಮಾಡಲು ತಕ್ಬೀರ್ ಹೇಳುವಾಗ. ಮೂರನೆಯದು: ರುಕೂವಿನಿಂದ ತಲೆ ಎತ್ತಿ "ಸಮಿಅಲ್ಲಾಹು ಲಿಮನ್ ಹಮಿದ, ರಬ್ಬನಾ ವಲಕಲ್ ಹಮ್ದ್" ಎಂದು ಹೇಳುವಾಗ. ಆದರೆ, ಸುಜೂದ್ ಮಾಡುವಾಗ ಅಥವಾ ಸುಜೂದ್‌ನಿಂದ ತಲೆ ಎತ್ತುವಾಗ ಅವರು ಕೈಗಳನ್ನು ಎತ್ತುತ್ತಿರಲಿಲ್ಲ.

Hadeeth benefits

  1. ನಮಾಝ್ ಮಾಡುವಾಗ ಕೈಗಳನ್ನು ಎತ್ತಲು ಕಾರಣವೇನೆಂದರೆ, ಅದು ನಮಾಝಿನ ಅಲಂಕಾರವಾಗಿದೆ ಮತ್ತು ಅಲ್ಲಾಹನನ್ನು ಮಹಿಮೆಪಡಿಸುವುದಾಗಿದೆ.
  2. ಅಬೂದಾವೂದ್ ಮತ್ತಿತರರು ವರದಿ ಮಾಡಿದ ಅಬೂ ಹುಮೈದ್ ಸಾಇದೀಯವರ ವರದಿಯಲ್ಲಿರುವಂತೆ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಾಲ್ಕನೇ ಸ್ಥಳದಲ್ಲಿ ಕೈ ಎತ್ತುತ್ತಿದ್ದರೆಂದು ಸಾಬೀತಾಗಿದೆ. ಅಂದರೆ, ಮೂರು ಅಥವಾ ನಾಲ್ಕು ರಕಅತ್‌ಗಳನ್ನು ಹೊಂದಿರುವ ನಮಾಝ್‌ನಲ್ಲಿ ಮೊದಲ ತಶಹ್ಹುದ್ ಮುಗಿಸಿ ಎದ್ದು ನಿಲ್ಲುವಾಗ.
  3. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಎರಡು ಕಿವಿಗಳನ್ನು ಸ್ಪರ್ಶಿಸದೆ, ಅವುಗಳಿಗೆ ಸಮಾನಾಂತರವಾಗಿ ಕೈಗಳನ್ನು ಎತ್ತುತ್ತಿದ್ದರೆಂದು ಸಾಬೀತಾಗಿದೆ. ಬುಖಾರಿ ಮತ್ತು ಮುಸ್ಲಿಂನಲ್ಲಿರುವ ಮಾಲಿಕ್ ಬಿನ್ ಹುವೈರಿಸ್ ರವರ ವರದಿಯಲ್ಲಿ ಹೀಗಿದೆ: "ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಕ್ಬೀರ್ ಹೇಳುವಾಗ ತಮ್ಮ ಕೈಗಳನ್ನು ತಮ್ಮ ಎರಡು ಕಿವಿಗಳಿಗೆ ಸಮಾನಾಂತರದಲ್ಲಾಗುವ ತನಕ ಎತ್ತುತ್ತಿದ್ದರು."
  4. ಇಮಾಮರು ಮತ್ತು ಒಂಟಿಯಾಗಿ ನಮಾಝ್ ಮಾಡುವವರು "ಸಮಿಅಲ್ಲಾಹು ಲಿಮನ್ ಹಮಿದ" ಮತ್ತು "ರಬ್ಬನಾ ವಲಕಲ್ ಹಮ್ದ್" ಎರಡನ್ನೂ ಪಠಿಸಬೇಕಾಗಿದೆ. ಆದರೆ, ಇಮಾಮರ ಹಿಂದೆ ನಮಾಝ್ ಮಾಡುವವರು "ರಬ್ಬನಾ ವಲಕಲ್ ಹಮ್ದ್" ಎಂದು ಮಾತ್ರ ಪಠಿಸಬೇಕು.
  5. ರುಕೂ ಮಾಡಿದ ನಂತರ "ರಬ್ಬನಾ ವಲಕಲ್ ಹಮ್ದ್" ಎಂದು ಹೇಳುವುದು ಪ್ರವಾದಿಯವರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಾಬೀತಾಗಿದೆ. ಇದಕ್ಕೆ ನಾಲ್ಕು ರೂಪಗಳಿದ್ದು, ಇಲ್ಲಿ ಅದರ ಒಂದು ರೂಪವನ್ನು ತಿಳಿಸಲಾಗಿದೆ. ಈ ಎಲ್ಲಾ ರೂಪಗಳನ್ನು ಅನುಸರಿಸುವುದು ಮತ್ತು ಒಂದೊಂದು ಸಲ ಒಂದೊಂದು ರೂಪವನ್ನು ಪಠಿಸುವುದು ಶ್ರೇಷ್ಠವಾಗಿದೆ.