/ ನಾನು ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದೆ: "ಅಲ್ಲಾಹನ ದೃಷ್ಟಿಯಲ್ಲಿ ಅತಿದೊಡ್ಡ ಪಾಪ ಯಾವುದು?" ಅವರು ಉತ್ತರಿಸಿದರು: "ಅಲ್ಲಾಹು ನಿನ್ನನ್ನು ಸೃಷ್ಟಿಸಿದವನಾಗಿದ್ದೂ ಸಹ ನೀನು ಅವನೊಂದಿಗೆ ಇತರರನ್ನು ಸರಿಸಾಟಿಯಾಗಿ ಮಾಡುವುದು...

ನಾನು ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದೆ: "ಅಲ್ಲಾಹನ ದೃಷ್ಟಿಯಲ್ಲಿ ಅತಿದೊಡ್ಡ ಪಾಪ ಯಾವುದು?" ಅವರು ಉತ್ತರಿಸಿದರು: "ಅಲ್ಲಾಹು ನಿನ್ನನ್ನು ಸೃಷ್ಟಿಸಿದವನಾಗಿದ್ದೂ ಸಹ ನೀನು ಅವನೊಂದಿಗೆ ಇತರರನ್ನು ಸರಿಸಾಟಿಯಾಗಿ ಮಾಡುವುದು...

ಅಬ್ದುಲ್ಲಾ ಬಿನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ನಾನು ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದೆ: "ಅಲ್ಲಾಹನ ದೃಷ್ಟಿಯಲ್ಲಿ ಅತಿದೊಡ್ಡ ಪಾಪ ಯಾವುದು?" ಅವರು ಉತ್ತರಿಸಿದರು: "ಅಲ್ಲಾಹು ನಿನ್ನನ್ನು ಸೃಷ್ಟಿಸಿದವನಾಗಿದ್ದೂ ಸಹ ನೀನು ಅವನೊಂದಿಗೆ ಇತರರನ್ನು ಸರಿಸಾಟಿಯಾಗಿ ಮಾಡುವುದು." ನಾನು ಹೇಳಿದೆ: "ಅದು ನಿಜಕ್ಕೂ ಗಂಭೀರ ಪಾಪವಾಗಿದೆ." ನಾನು ಕೇಳಿದೆ: " ನಂತರ ಯಾವುದು?" ಅವರು ಉತ್ತರಿಸಿದರು: "ನಿನ್ನ ಜೊತೆಗೆ ಆಹಾರ ಸೇವಿಸುವನು ಎಂಬ ಭಯದಿಂದ ನೀನು ನಿನ್ನ ಮಗುವನ್ನು ಹತ್ಯೆ ಮಾಡುವುದು." ನಾನು ಕೇಳಿದೆ: "ನಂತರ ಯಾವುದು?" ಅವರು ಉತ್ತರಿಸಿದರು: "ನಿನ್ನ ನೆರೆಮನೆಯವನ ಹೆಂಡತಿಯೊಂದಿಗೆ ವ್ಯಭಿಚಾರ ಮಾಡುವುದು."
متفق عليه

ವಿವರಣೆ

ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅತಿದೊಡ್ಡ ಪಾಪದ ಬಗ್ಗೆ ಕೇಳಲಾದಾಗ ಅವರು ಹೇಳಿದರು: ಅತಿದೊಡ್ಡ ಪಾಪವೆಂದರೆ ಶಿರ್ಕ್. ಅಂದರೆ ಅಲ್ಲಾಹನ ದೈವಿಕತೆ, ಪ್ರಭುತ್ವ ಮತ್ತು ಹೆಸರು-ಗುಣಲಕ್ಷಣಗಳಲ್ಲಿ ಅವನಿಗೆ ಸರಿಸಮಾನರನ್ನು ಅಥವಾ ಸರಿಸಾಟಿಯನ್ನು ನಿಶ್ಚಯಿಸುವುದು. ತೌಬ (ಪಶ್ಚಾತ್ತಾಪ) ಮಾಡದಿದ್ದರೆ ಅಲ್ಲಾಹು ಈ ಪಾಪವನ್ನು ಕ್ಷಮಿಸುವುದಿಲ್ಲ. ಈ ಪಾಪದೊಂದಿಗೆ ಸಾಯುವವರು ಶಾಶ್ವತ ನರಕವಾಸಿಗಳಾಗುತ್ತಾರೆ. ನಂತರದ ಅತಿದೊಡ್ಡ ಪಾಪವೆಂದರೆ, ಆಹಾರ ನೀಡಬೇಕಾಗುತ್ತದೆ ಎಂಬ ಭಯದಿಂದ ತನ್ನ ಸ್ವಂತ ಮಗುವನ್ನು ಹತ್ಯೆ ಮಾಡುವುದು. ಮನುಷ್ಯನನ್ನು ಕೊಲ್ಲುವುದು ನಿಷಿದ್ಧವಾಗಿದೆ. ಆದರೆ ಕೊಲೆಯಾದ ವ್ಯಕ್ತಿ ಕೊಲೆಗಾರನ ರಕ್ತಸಂಬಂಧಿಯಾಗಿದ್ದರೆ ಪಾಪವು ಗಂಭೀರವಾಗುತ್ತದೆ. ಅದೇ ರೀತಿ, ಅಲ್ಲಾಹು ಒದಗಿಸಿದ ಉಪಜೀವನದಲ್ಲಿ ಭಾಗಿಯಾಗುವನು ಎಂಬ ಭಯದಿಂದ ಕೊಲ್ಲುವಾಗ ಪಾಪವು ಇನ್ನಷ್ಟು ಗಂಭೀರವಾಗುತ್ತದೆ. ನಂತರದ ಅತಿದೊಡ್ಡ ಪಾಪವೆಂದರೆ, ನೆರೆಮನೆಯವರ ಹೆಂಡತಿಯೊಂದಿಗೆ ವ್ಯಭಿಚಾರ ಮಾಡುವುದು. ಅಂದರೆ, ಅವಳನ್ನು ಪುಸಲಾಯಿಸಿ ಅವಳು ವ್ಯಭಿಚಾರಕ್ಕೆ ಒಪ್ಪುವಂತೆ ಮಾಡುವುದು. ವ್ಯಭಿಚಾರವು ನಿಷಿದ್ಧವಾಗಿದೆ. ಆದರೆ ವ್ಯಭಿಚಾರ ಮಾಡಲಾಗುವ ಮಹಿಳೆ ನೆರೆಮನೆಯವನ ಹೆಂಡತಿಯಾಗಿದ್ದರೆ ಪಾಪವು ಗಂಭೀರವಾಗುತ್ತದೆ. ಏಕೆಂದರೆ, ನೆರೆಯವರೊಡನೆ ಒಳ್ಳೆಯ ರೀತಿಯಲ್ಲಿ ಮತ್ತು ಅತ್ಯುತ್ತಮವಾಗಿ ವರ್ತಿಸಬೇಕೆಂದು ಇಸ್ಲಾಂ ಬೋಧಿಸುತ್ತದೆ.

Hadeeth benefits

  1. ಸತ್ಕರ್ಮಗಳ ಪ್ರತಿಫಲದಲ್ಲಿ ಹೆಚ್ಚು-ಕಡಿಮೆ ಇರುವಂತೆ ಪಾಪಗಳ ಗಂಭೀರತೆಯಲ್ಲೂ ಹೆಚ್ಚು-ಕಡಿಮೆ ಇದೆ.
  2. ಅತಿದೊಡ್ಡ ಪಾಪವೆಂದರೆ, ಅಲ್ಲಾಹನೊಂದಿಗೆ ಸಹಭಾಗಿಗಳನ್ನು ಸೇರಿಸುವುದು (ಶಿರ್ಕ್). ನಂತರದ್ದು ಆಹಾರ ಸೇವಿಸುವ ಭಯದಿಂದ ಮಗುವನ್ನು ಕೊಲ್ಲುವುದು. ಅದರ ನಂತರದ್ದು ನೆರೆಯವನ ಹೆಂಡತಿಯೊಂದಿಗೆ ವ್ಯಭಿಚಾರ ಮಾಡುವುದು.
  3. ಆಹಾರವಿರುವುದು ಅಲ್ಲಾಹನ ಕೈಯಲ್ಲಿ. ಎಲ್ಲಾ ಜೀವಿಗಳಿಗೂ ಆಹಾರ ನೀಡುವ ಹೊಣೆಗಾರಿಕೆಯನ್ನು ಅಲ್ಲಾಹು ವಹಿಸಿಕೊಂಡಿದ್ದಾನೆ.
  4. ನೆರೆಹೊರೆಯವರ ಹಕ್ಕುಗಳು ಮಹತ್ವಪೂರ್ಣವಾಗಿವೆ. ನೆರೆಯವರಲ್ಲದವರಿಗೆ ತೊಂದರೆ ಕೊಡುವುದಕ್ಕಿಂತಲೂ ನೆರೆಯವರಿಗೆ ತೊಂದರೆ ಕೊಡುವುದು ಗಂಭೀರ ಪಾಪವಾಗಿದೆ.
  5. ಏಕೈಕನು ಮತ್ತು ಯಾವುದೇ ಸಹಭಾಗಿಗಳಿಲ್ಲದ ಸೃಷ್ಟಿಕರ್ತನು ಮಾತ್ರ ಆರಾಧನೆಗೆ ಅರ್ಹನು.