/ ಮುಅಝ್ಝಿನ್ ಅಝಾನ್ ನೀಡುವುದನ್ನು ಕೇಳಿದರೆ, ಅವರು ಹೇಳಿದಂತೆಯೇ ಹೇಳಿರಿ. ನಂತರ ನನ್ನ ಮೇಲೆ ಸಲಾತ್ ಹೇಳಿರಿ

ಮುಅಝ್ಝಿನ್ ಅಝಾನ್ ನೀಡುವುದನ್ನು ಕೇಳಿದರೆ, ಅವರು ಹೇಳಿದಂತೆಯೇ ಹೇಳಿರಿ. ನಂತರ ನನ್ನ ಮೇಲೆ ಸಲಾತ್ ಹೇಳಿರಿ

ಅಬ್ದುಲ್ಲಾ ಬಿನ್ ಅಮ್ರ್ ಬಿನ್ ಆಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಮುಅಝ್ಝಿನ್ ಅಝಾನ್ ನೀಡುವುದನ್ನು ಕೇಳಿದರೆ, ಅವರು ಹೇಳಿದಂತೆಯೇ ಹೇಳಿರಿ. ನಂತರ ನನ್ನ ಮೇಲೆ ಸಲಾತ್ ಹೇಳಿರಿ. ಏಕೆಂದರೆ ಯಾರು ನನ್ನ ಮೇಲೆ ಒಂದು ಸಲಾತ್ ಹೇಳುತ್ತಾರೋ, ಅಲ್ಲಾಹು ಅವರ ಮೇಲೆ ಹತ್ತು ಸಲಾತ್‌ಗಳನ್ನು ಹೇಳುತ್ತಾನೆ. ನಂತರ ಅಲ್ಲಾಹನಲ್ಲಿ ನನಗಾಗಿ 'ವಸೀಲ'ವನ್ನು ಬೇಡಿರಿ. ಅದು ಸ್ವರ್ಗದಲ್ಲಿರುವ ಒಂದು ಸ್ಥಾನಮಾನವಾಗಿದೆ. ಅದು ಅಲ್ಲಾಹನ ದಾಸರಲ್ಲಿ ಒಬ್ಬರಿಗೆ ಮಾತ್ರ ಸಿಗುತ್ತದೆ. ಅದು ನನಗೆ ಸಿಗಬೇಕೆಂದು ನಾನು ಆಶಿಸುತ್ತೇನೆ. ಯಾರು ನನಗೋಸ್ಕರ 'ವಸೀಲ' ಬೇಡುತ್ತಾರೋ ಅವರಿಗೆ ನನ್ನ ಶಿಫಾರಸ್ಸು ದೊರೆಯುತ್ತದೆ."
رواه مسلم

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಕಲಿಸಿಕೊಡುವುದೇನೆಂದರೆ, ಮುಅಝ್ಝಿನ್ ನಮಾಝಿಗಾಗಿ ಅಝಾನ್ ನೀಡುವುದನ್ನು ಕೇಳಿದರೆ, ಅವರು ಹೇಳುವ ವಾಕ್ಯಗಳನ್ನು ಹಾಗೆಯೇ ಪುನರುಚ್ಛರಿಸಬೇಕು. ಆದರೆ ಮುಅಝ್ಝಿನ್ "ಹಯ್ಯ ಅಲಸ್ಸಲಾಹ್" ಮತ್ತು "ಹಯ್ಯ ಅಲಲ್ ಫಲಾಹ್" ಎಂದು ಹೇಳುವಾಗ, "ಲಾ ಹೌಲ ವಲಾ ಕುವ್ವತ ಇಲ್ಲಾ ಬಿಲ್ಲಾಹ್" ಎಂದು ಹೇಳಬೇಕು. ಅಝಾನ್ ಮುಗಿದ ತಕ್ಷಣ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೇಲೆ ಸಲಾತ್ ಹೇಳಬೇಕು. ಏಕೆಂದರೆ ಅವರ ಮೇಲೆ ಒಂದು ಸಲಾತ್ ಹೇಳುವವರ ಮೇಲೆ ಅಲ್ಲಾಹು ಹತ್ತು ಸಲಾತ್‌ಗಳನ್ನು ಹೇಳುತ್ತಾನೆ. ಅಲ್ಲಾಹು ಸಲಾತ್ ಹೇಳುವುದು ಎಂದರೆ, ದೇವದೂತರ ಬಳಿ ಅವರನ್ನು ಪ್ರಶಂಸಿಸುವುದು. ನಂತರ ತನಗೋಸ್ಕರ 'ವಸೀಲ' ಬೇಡಬೇಕೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆದೇಶಿಸುತ್ತಾರೆ. ಅದು ಸ್ವರ್ಗದಲ್ಲಿರುವ ಒಂದು ಉನ್ನತ ಸ್ಥಾನವಾಗಿದೆ. ಅದು ಅಲ್ಲಾಹನ ಸಂಪೂರ್ಣ ಸೃಷ್ಟಿಗಳ ಪೈಕಿ ಕೇವಲ ಒಬ್ಬರಿಗೆ ಮಾತ್ರ ದೊರೆಯುತ್ತದೆ. ಆ ಸ್ಥಾನ ಅವರಿಗೆ ಸಿಗಬೇಕೆಂದು ಅವರು ಆಶಿಸುತ್ತಾರೆ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇದನ್ನು ಹೇಳಿದ್ದು ಅವರ ವಿನಯದಿಂದಾಗಿದೆ. ಏಕೆಂದರೆ, ಅಂತಹ ಉನ್ನತ ಸ್ಥಾನವು ಕೇವಲ ಒಬ್ಬರಿಗೆ ಮಾತ್ರ ಸಿಗುವುದಾದರೆ, ಆ ಒಬ್ಬರು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಾತ್ರವಾಗಿರಲು ಸಾಧ್ಯ. ಏಕೆಂದರೆ ಅವರು ಸೃಷ್ಟಿಗಳಲ್ಲೇ ಶ್ರೇಷ್ಠರಾಗಿದ್ದಾರೆ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳುವುದೇನೆಂದರೆ, ಯಾರು ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) 'ವಸೀಲ' ಸಿಗಬೇಕೆಂದು ಪ್ರಾರ್ಥಿಸುತ್ತಾರೋ ಅವರಿಗೆ ಅವರ ಶಿಫಾರಸ್ಸು ದೊರೆಯುತ್ತದೆ.

Hadeeth benefits

  1. ಮುಅಝ್ಝಿನ್‌ಗೆ ಉತ್ತರ ಕೊಡುವುದನ್ನು ಪ್ರೋತ್ಸಾಹಿಸಲಾಗಿದೆ.
  2. ಮುಅಝ್ಝಿನ್‌ಗೆ ಉತ್ತರ ಕೊಟ್ಟ ನಂತರ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೇಲೆ ಸಲಾತ್ ಹೇಳುವುದರ ಶ್ರೇಷ್ಠತೆಯನ್ನು ತಿಳಿಸಲಾಗಿದೆ.
  3. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೇಲೆ ಸಲಾತ್ ಹೇಳಿದ ನಂತರ ಅವರಿಗೋಸ್ಕರ 'ವಸೀಲ' ಬೇಡಲು ಪ್ರೋತ್ಸಾಹಿಸಲಾಗಿದೆ.
  4. 'ವಸೀಲ'ದ ಅರ್ಥವನ್ನು, ಅದರ ಉನ್ನತ ಸ್ಥಾನವನ್ನು ಮತ್ತು ಅದು ಒಬ್ಬರಿಗೆ ಮಾತ್ರ ಸಿಗುತ್ತದೆಯೆಂದು ವಿವರಿಸಲಾಗಿದೆ.
  5. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಶ್ರೇಷ್ಠತೆಯನ್ನು ವಿವರಿಸಲಾಗಿದೆ. ಏಕೆಂದರೆ, ಆ ಉನ್ನತ ಸ್ಥಾನವನ್ನು ಅವರಿಗೆ ಮಾತ್ರ ವಿಶೇಷವಾಗಿ ಕಾದಿರಿಸಲಾಗಿದೆ.
  6. ಯಾರು ಪ್ರವಾದಿಗೋಸ್ಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಲ್ಲಾಹನಲ್ಲಿ 'ವಸೀಲ' ಬೇಡುತ್ತಾರೋ ಅವರಿಗೆ ಶಿಫಾರಸ್ಸು ದೊರೆಯುತ್ತದೆ.
  7. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿನಯವನ್ನು ವಿವರಿಸಲಾಗಿದೆ. ಏಕೆಂದರೆ, ಆ ಸ್ಥಾನವು ಅವರಿಗೆ ಮಾತ್ರ ಸೀಮಿತವಾಗಿದ್ದರೂ ಅವರು ಅದಕ್ಕಾಗಿ ಪ್ರಾರ್ಥಿಸಬೇಕೆಂದು ತಮ್ಮ ಸಮುದಾಯದೊಡನೆ ವಿನಂತಿಸಿದ್ದಾರೆ.
  8. ಅಲ್ಲಾಹನ ಮಹಾ ಔದಾರ್ಯ ಮತ್ತು ದಯೆಯನ್ನು, ಅಂದರೆ ಒಂದು ಸತ್ಕರ್ಮಕ್ಕೆ ಅದರ ಹತ್ತು ಪಟ್ಟು ಪ್ರತಿಫಲವನ್ನು ತಿಳಿಸಲಾಗಿದೆ.