- ಸರ್ವಶಕ್ತನಾದ ಅಲ್ಲಾಹನ ವಿಶಾಲವಾದ ದಯೆ, ಕ್ಷಮೆ ಮತ್ತು ಉದಾರತೆಯನ್ನು ತಿಳಿಸಲಾಗಿದೆ.
- ದೇವ ವಿಶ್ವಾಸದ ಶ್ರೇಷ್ಠತೆಯನ್ನು ಮತ್ತು ಏಕದೇವ ವಿಶ್ವಾಸಿಗಳ ಪಾಪಗಳನ್ನು ಅಲ್ಲಾಹು ಕ್ಷಮಿಸುತ್ತಾನೆಂದು ತಿಳಿಸಲಾಗಿದೆ.
- ದೇವಸಹಭಾಗಿತ್ವದ (ಶಿರ್ಕ್) ಅಪಾಯವನ್ನು ಮತ್ತು ದೇವಸಹಭಾಗಿತ್ವ ಮಾಡುವವರಿಗೆ ಅಲ್ಲಾಹು ಕ್ಷಮಿಸುವುದಿಲ್ಲವೆಂದು ತಿಳಿಸಲಾಗಿದೆ.
- ಇಬ್ನ್ ರಜಬ್ ಹೇಳಿದರು: "ಪಾಪಗಳಿಗೆ ಕ್ಷಮೆ ದೊರೆಯುವ ಮೂರು ಮಾರ್ಗಗಳನ್ನು ಈ ಹದೀಸ್ ಒಳಗೊಂಡಿದೆ. ಒಂದು: ನಿರೀಕ್ಷೆಯಿಂದ ಮಾಡುವ ಪ್ರಾರ್ಥನೆ. ಎರಡು: ಕ್ಷಮೆಯಾಚನೆ ಮತ್ತು ಪಶ್ಚಾತ್ತಾಪದ ಬೇಡಿಕೆ. ಮೂರು: ಏಕದೇವ ವಿಶ್ವಾಸದಲ್ಲಿ ಮರಣ ಹೊಂದುವುದು."
- ಇದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಲ್ಲಾಹನಿಂದ ವರದಿ ಮಾಡುವ ಹದೀಸ್ ಆಗಿದ್ದು ಇದನ್ನು ಪವಿತ್ರ (ಕುದ್ಸಿ) ಅಥವಾ ದೈವಿಕ ಹದೀಸ್ ಎಂದು ಕರೆಯಲಾಗುತ್ತದೆ. ಇಂತಹ ಹದೀಸ್‌ಗಳ ಪದಗಳು ಮತ್ತು ಅರ್ಥವು ಅಲ್ಲಾಹನದ್ದೇ ಆಗಿದ್ದರೂ, ಇವುಗಳಿಗೆ ಕುರ್‌ಆನ್‌ನ ವಚನಗಳಿಗೆ ಇರುವ ವಿಶೇಷತೆಗಳಿಲ್ಲ. ಅಂದರೆ ಈ ವಚನಗಳನ್ನು ಪಠಿಸುವುದು ಆರಾಧನೆಯಲ್ಲ, ಇವುಗಳನ್ನು ಸ್ಪರ್ಶಿಸಲು ಶುದ್ಧಿಯಿರಬೇಕಾದ ಅಗತ್ಯವಿಲ್ಲ ಮತ್ತು ಇವು ಸವಾಲಿನ ರೂಪದಲ್ಲಿ ಅಥವಾ ಪವಾಡದ ರೂಪದಲ್ಲಿ ಅವತೀರ್ಣವಾಗಿಲ್ಲ.
- ಪಾಪಗಳಲ್ಲಿ ಮೂರು ವಿಧಗಳಿವೆ: ಒಂದು: ಅಲ್ಲಾಹನೊಂದಿಗೆ ಶಿರ್ಕ್ (ಸಹಭಾಗಿತ್ವ) ಮಾಡುವುದು. ಇದನ್ನು ಅಲ್ಲಾಹು ಎಂದಿಗೂ ಕ್ಷಮಿಸುವುದಿಲ್ಲ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಖಂಡಿತವಾಗಿಯೂ ಅಲ್ಲಾಹನೊಡನೆ ಶಿರ್ಕ್ (ಸಹಭಾಗಿತ್ವ) ಮಾಡಿದವನಿಗೆ ಅಲ್ಲಾಹು ಸ್ವರ್ಗವನ್ನು ನಿಷಿದ್ಧಗೊಳಿಸಿದ್ದಾನೆ." ಎರಡು: ಮನುಷ್ಯನು ತನ್ನ ಮತ್ತು ತನ್ನ ಪರಿಪಾಲಕನ (ಅಲ್ಲಾಹನ) ನಡುವಿನ ವಿಷಯಗಳಲ್ಲಿ ಪಾಪವೆಸಗುವ ಮೂಲಕ ತನ್ನ ಮೇಲೆ ತಾನೇ ಅಕ್ರಮವೆಸಗುವುದು. ಸರ್ವಶಕ್ತನಾದ ಅಲ್ಲಾಹು ಇಚ್ಚಿಸಿದರೆ, ಅದನ್ನು ಕ್ಷಮಿಸುತ್ತಾನೆ ಮತ್ತು ನಿರ್ಲಕ್ಷಿಸುತ್ತಾನೆ. ಮೂರು: ಅಲ್ಲಾಹು ಸ್ವಲ್ಪವೂ ಬಿಟ್ಟುಬಿಡದ ಪಾಪಗಳು. ಅಂದರೆ ಮನುಷ್ಯರು ತಮ್ಮ ತಮ್ಮಲ್ಲಿ ಮಾಡುವ ಅಕ್ರಮಗಳು. ಇವುಗಳಿಗೆ ಪ್ರತೀಕಾರ ಪಡೆಯುವುದು ಅನಿವಾರ್ಯವಾಗಿದೆ.