- ಪವಿತ್ರ ಕುರ್‌ಆನಿನ ಸ್ಪಷ್ಟ ವಚನಗಳು ಎಂದರೆ ಸ್ಪಷ್ಟವಾದ ಅರ್ಥವನ್ನು ಹೊಂದಿರುವ ವಚನಗಳು. ಹೋಲಿಕೆ ಇರುವ ವಚನಗಳು ಎಂದರೆ ಒಂದಕ್ಕಿಂತ ಹೆಚ್ಚು ಅರ್ಥದ ಸಂಭಾವ್ಯತೆ ಇರುವ ಮತ್ತು ಸೂಕ್ಷ್ಮ ಪರಿಶೋಧನೆ ಮತ್ತು ಪಾಂಡಿತ್ಯದ ಅಗತ್ಯವಿರುವ ವಚನಗಳು.
- ವಕ್ರ ಮತ್ತು ನೂತನವಾದದ ಜನರೊಂದಿಗೆ ಹಾಗೂ ಜನರಲ್ಲಿ ಸಂಶಯಗಳನ್ನು ಹುಟ್ಟಿಸಿ ದಾರಿ ತಪ್ಪಿಸಲು ಬಯಸುವವರೊಂದಿಗೆ ಸೇರಬಾರದೆಂದು ಇದರಲ್ಲಿ ಎಚ್ಚರಿಕೆಯಿದೆ.
- ವಚನದ ಕೊನೆಯಲ್ಲಿ ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಬುದ್ಧಿವಂತರ ಹೊರತು ಇನ್ನಾರೂ ಉಪದೇಶವನ್ನು ಸ್ವೀಕರಿಸುವುದಿಲ್ಲ." ಇದು ವಕ್ರ ಜನರ ಛೀಮಾರಿ ಮತ್ತು ಬುದ್ಧಿವಂತರ ಪ್ರಶಂಸೆಯಾಗಿದೆ. ಅಂದರೆ, ಆಲೋಚಿಸದ, ಉಪದೇಶವನ್ನು ಸ್ವೀಕರಿಸದ ಮತ್ತು ಮೋಹಗಳನ್ನು ಹಿಂಬಾಲಿಸುವ ಜನರು ಬುದ್ಧಿವಂತರಲ್ಲ.
- ಹೋಲಿಕೆಯಿರುವ ವಚನಗಳನ್ನು ಹಿಂಬಾಲಿಸುವುದು ಹೃದಯದ ವಕ್ರತೆಗೆ ಕಾರಣವಾಗುತ್ತದೆ.
- ಅರ್ಥ ಮಾಡಿಕೊಳ್ಳಲು ಸಾಧ್ಯವಾಗದ ಹೋಲಿಕೆಯಿರುವ ವಚನಗಳನ್ನು ಅರ್ಥವು ಸ್ಪಷ್ಟವಾಗಿರುವ ಸ್ಪಷ್ಟ ವಚನಗಳೆಡೆಗೆ ಮರಳಿಸುವುದು ಕಡ್ಡಾಯವಾಗಿದೆ ಎಂದು ಈ ಹದೀಸ್ ತಿಳಿಸುತ್ತದೆ.
- ಜನರನ್ನು ಪರೀಕ್ಷಿಸಿ ಸತ್ಯವಿಶ್ವಾಸಿಗಳನ್ನು ಮತ್ತು ದುರ್ಮಾರ್ಗಿಗಳನ್ನು ಬೇರ್ಪಡಿಸಿ ತಿಳಿಯಲು ಸರ್ವಶಕ್ತನಾದ ಅಲ್ಲಾಹು ಕುರ್‌ಆನಿನ ಕೆಲವು ವಚನಗಳನ್ನು ಸ್ಪಷ್ಟ ವಚನಗಳಾಗಿ ಮತ್ತು ಇತರ ಕೆಲವು ವಚನಗಳನ್ನು ಹೋಲಿಕೆಯುಳ್ಳದ್ದಾಗಿ ಮಾಡಿದ್ದಾನೆಂದು ಈ ಹದೀಸ್ ತಿಳಿಸುತ್ತದೆ.
- ಕುರ್‌ಆನಿನಲ್ಲಿ ಹೋಲಿಕೆಯಿರುವ ವಚನಗಳಿರುವುದರಿಂದ, ಇತರ ಜನರ ಮೇಲೆ ವಿದ್ವಾಂಸರಿಗಿರುವ ಶ್ರೇಷ್ಠತೆಯು ಬಹಿರಂಗವಾಗುತ್ತದೆ, ಬುದ್ಧಿಯ ಪರಿಮಿತಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಬುದ್ಧಿಯ ಪರಿಮಿತಿಯನ್ನು ಅರ್ಥ ಮಾಡಿಕೊಂಡು ಸೃಷ್ಟಿಕರ್ತನಾದ ಅಲ್ಲಾಹನಿಗೆ ಶರಣಾಗಲು ಸಾಧ್ಯವಾಗುತ್ತದೆ.
- ಜ್ಞಾನದಲ್ಲಿ ಸದೃಢರಾದವರ ಶ್ರೇಷ್ಠತೆ ಮತ್ತು ಸದೃಢರಾಗಬೇಕಾದ ಅನಿವಾರ್ಯತೆಯನ್ನು ಈ ಹದೀಸ್ ತಿಳಿಸುತ್ತದೆ.
- "ವಮಾ ಯಅ್‌ಲಮು ತಅ್‌ವೀಲಹೂ ಇಲ್ಲಲ್ಲಾಹು ವರ್‍ರಾಸಿಖೂನ ಫಿಲ್ ಇಲ್ಮ್"—ಇದರಲ್ಲಿ ಅಲ್ಲಾಹು ಎಂಬಲ್ಲಿ ಪಠಣವನ್ನು ನಿಲ್ಲಿಸುವ ವಿಷಯದಲ್ಲಿ ವ್ಯಾಖ್ಯಾನಕಾರರಿಗೆ ಎರಡು ಅಭಿಪ್ರಾಯಗಳಿವೆ: "ಅಲ್ಲಾಹು" ಎಂಬಲ್ಲಿ ಪಠಣವನ್ನು ನಿಲ್ಲಿಸಿದರೆ ವಚನದಲ್ಲಿರುವ "ತಅ್‌ವೀಲ್" ಎಂಬ ಪದಕ್ಕೆ ಒಂದು ವಸ್ತುವಿನ ತಿರುಳಿನ ಬಗ್ಗೆಯಿರುವ ಜ್ಞಾನ ಎಂಬ ಅರ್ಥ ಬರುತ್ತದೆ. ಈ ಜ್ಞಾನವು ಅಲ್ಲಾಹನಿಗೆ ಮಾತ್ರವಿದ್ದು ಅದನ್ನು ತಿಳಿಯುವ ಯಾವುದೇ ಮಾರ್ಗವು ಮನುಷ್ಯರಿಗೆ ಲಭ್ಯವಿಲ್ಲ. ಉದಾಹರಣೆಗೆ, ಆತ್ಮ ಪ್ರಳಯ ಮುಂತಾದವುಗಳ ಜ್ಞಾನ ಇತ್ಯಾದಿ. ಜ್ಞಾನದಲ್ಲಿ ಸದೃಢರಾಗಿರುವವರು ಅದರಲ್ಲಿ ವಿಶ್ವಾಸವಿಡುತ್ತಾರೆ ಮತ್ತು ಅದರ ನಿಜಸ್ಥಿತಿಯನ್ನು ಅಲ್ಲಾಹನಿಗೆ ಮರಳಿಸಿ ಅಲ್ಲಾಹನಿಗೆ ಶರಣಾಗುತ್ತಾರೆ ಮತ್ತು ಸುರಕ್ಷಿತ ನಿಲುವನ್ನು ಹೊಂದುತ್ತಾರೆ. "ಅಲ್ಲಾಹು" ಎಂಬಲ್ಲಿ ಪಠಣವನ್ನು ನಿಲ್ಲಿಸದೆ ಮುಂದುವರಿಸಿದರೆ ವಚನದಲ್ಲಿರುವ "ತಅ್‌ವೀಲ್" ಎಂಬ ಪದಕ್ಕೆ ವ್ಯಾಖ್ಯಾನ ಮತ್ತು ವಿವರಣೆ ಎಂಬ ಅರ್ಥ ಬರುತ್ತದೆ. ಅಂದರೆ, ಅವುಗಳ ವ್ಯಾಖ್ಯಾನ ಮತ್ತು ವಿವರಣೆಯನ್ನು ಅಲ್ಲಾಹು ತಿಳಿದಿದ್ದಾನೆ, ಹಾಗೆಯೇ ಜ್ಞಾನದಲ್ಲಿ ಸದೃಢರಾಗಿರುವವರೂ ತಿಳಿದಿದ್ದಾರೆ. ಅವರು ಅವುಗಳಲ್ಲಿ ವಿಶ್ವಾಸವಿಡುತ್ತಾರೆ ಮತ್ತು ಅವುಗಳನ್ನು ಸ್ಪಷ್ಟ ಅರ್ಥಗಳಿರುವ ವಚನಗಳಿಗೆ ಮರಳಿಸುತ್ತಾರೆ.