/ ಮಂತ್ರಗಳು, ತಾಯಿತಗಳು ಮತ್ತು ತಿವ್ಲ (ಪತಿ-ಪತ್ನಿಯರಲ್ಲಿ ಪ್ರೀತಿ ಮೂಡಿಸುವ ತಂತ್ರ) ದೇವಸಹಭಾಗಿತ್ವ (ಶಿರ್ಕ್) ಆಗಿದೆ...

ಮಂತ್ರಗಳು, ತಾಯಿತಗಳು ಮತ್ತು ತಿವ್ಲ (ಪತಿ-ಪತ್ನಿಯರಲ್ಲಿ ಪ್ರೀತಿ ಮೂಡಿಸುವ ತಂತ್ರ) ದೇವಸಹಭಾಗಿತ್ವ (ಶಿರ್ಕ್) ಆಗಿದೆ...

ಅಬ್ದುಲ್ಲಾ ಬಿನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಮಂತ್ರಗಳು, ತಾಯಿತಗಳು ಮತ್ತು ತಿವ್ಲ (ಪತಿ-ಪತ್ನಿಯರಲ್ಲಿ ಪ್ರೀತಿ ಮೂಡಿಸುವ ತಂತ್ರ) ದೇವಸಹಭಾಗಿತ್ವ (ಶಿರ್ಕ್) ಆಗಿದೆ."
رواه أبو داود وابن ماجه وأحمد

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಕೆಲವು ಕಾರ್ಯಗಳನ್ನು ಮಾಡುವುದು ಶಿರ್ಕ್ (ದೇವಸಹಭಾಗಿತ್ವ ಅಥವಾ ಬಹುದೇವಾರಾಧನೆ) ಎಂದು ಹೇಳಿದ್ದಾರೆ: ಮೊದಲನೆಯದು: ಮಂತ್ರ. ಅಂದರೆ ಅಜ್ಞಾನಕಾಲದ ಜನರು ರೋಗ ನಿವಾರಣೆಗಾಗಿ ಪಠಿಸುತ್ತಿದ್ದ ದೇವಸಹಭಾಗಿತ್ವವನ್ನು (ಶಿರ್ಕ್) ಒಳಗೊಂಡ ಪದಗಳಿರುವ ಮಂತ್ರಗಳು. ಎರಡನೆಯದು: ತಾಯಿತಗಳು. ಕೆಟ್ಟ ದೃಷ್ಟಿಯಿಂದ ರಕ್ಷಿಸಲು ಮಕ್ಕಳು, ಪ್ರಾಣಿಗಳು ಮತ್ತು ಇತರ ವಸ್ತುಗಳಿಗೆ ಇವುಗಳನ್ನು ಕಟ್ಟಲಾಗುತ್ತದೆ. ಮೂರನೆಯದು: ತಿವ್ಲ. ಪತಿ-ಪತ್ನಿಯರಲ್ಲಿ ಒಬ್ಬರು ಇನ್ನೊಬ್ಬರನ್ನು ಪ್ರೀತಿಸುವಂತೆ ಮಾಡುವ ತಂತ್ರ. ಇವೆಲ್ಲವೂ ಶಿರ್ಕ್ (ದೇವಸಹಭಾಗಿತ್ವ) ಆಗಿವೆ. ಏಕೆಂದರೆ, ಇಲ್ಲಿ ಕೆಲವು ವಿಷಯಗಳಿಗೆ ಕೆಲವು ವಿಷಯಗಳನ್ನು ಕಾರಣವನ್ನಾಗಿ ಮಾಡಲಾಗುತ್ತದೆ. ಆದರೆ ಅವು ಧಾರ್ಮಿಕ ಪುರಾವೆಗಳಿಂದ ಅಥವಾ ಪ್ರಾಯೋಗಿಕ ನೆಲೆಯಿಂದ ಸಾಬೀತಾದ ಕಾರಣಗಳಲ್ಲ. ಕುರ್‌ಆನ್ ಪಠಣ ಮುಂತಾದ ಧಾರ್ಮಿಕವಾಗಿ ಸಾಬೀತಾದ ಕಾರಣಗಳನ್ನು ಮತ್ತು ಔಷಧಿ ಸೇವನೆ ಮುಂತಾದ ಪ್ರಾಯೋಗಿಕವಾಗಿ ಸಾಬೀತಾದ ಕಾರಣಗಳನ್ನು ರೋಗ ನಿವಾರಣೆಗಾಗಿ ಬಳಸಬಹುದು. ಆದರೆ ಅವು ಕೇವಲ ಕಾರಣಗಳು ಮಾತ್ರ; ಲಾಭ ಮತ್ತು ಹಾನಿ ಅಲ್ಲಾಹನ ಕೈಯಲ್ಲಿದೆ ಎಂದು ವಿಶ್ವಾಸವಿಡುವುದು ಕಡ್ಡಾಯ.

Hadeeth benefits

  1. ಈ ಹದೀಸ್ ಏಕದೇವಾರಾಧನೆಯನ್ನು (ತೌಹೀದ್) ಮತ್ತು ಇಸ್ಲಾಮೀ ವಿಶ್ವಾಸಸಂಹಿತೆಯನ್ನು ಕಳಂಕಗೊಳ್ಳದಂತೆ ರಕ್ಷಿಸಬೇಕೆಂದು ತಿಳಿಸುತ್ತದೆ.
  2. ದೇವಸಹಭಾಗಿತ್ವವನ್ನು (ಶಿರ್ಕ್) ಹೊಂದಿರುವ ಮಂತ್ರಗಳು, ತಾಯಿತಗಳು ಮತ್ತು ತಿವ್ಲಗಳ ಬಳಕೆಯನ್ನು ಈ ಹದೀಸ್ ನಿಷೇಧಿಸುತ್ತದೆ.
  3. ಮೇಲಿನ ಮೂರು ವಿಷಯಗಳನ್ನು ಕಾರಣಗಳೆಂದು ವಿಶ್ವಾಸವಿಡುವುದು ಚಿಕ್ಕ ಸಹಭಾಗಿತ್ವ (ಶಿರ್ಕ್ ಅಸ್ಗರ್) ಆಗಿದೆ. ಏಕೆಂದರೆ ಕಾರಣವಲ್ಲದ್ದನ್ನು ಇಲ್ಲಿ ಕಾರಣವನ್ನಾಗಿ ಮಾಡಲಾಗುತ್ತದೆ. ಆದರೆ ಅವು ಸ್ವಯಂ ಉಪಕಾರ ಮತ್ತು ತೊಂದರೆ ಮಾಡುತ್ತದೆಯೆಂದು ವಿಶ್ವಾಸವಿಟ್ಟರೆ, ಅದು ದೊಡ್ಡ ಸಹಭಾಗಿತ್ವ (ಶಿರ್ಕ್ ಅಕ್ಬರ್) ಆಗಿದೆ.
  4. ದೇವಸಹಭಾಗಿತ್ವವನ್ನು (ಶಿರ್ಕ್) ಹೊಂದಿರುವ ಮತ್ತು ನಿಷೇಧಿಸಲಾಗಿರುವ ಕಾರಣಗಳನ್ನು ಬಳಸುವುದರ ಬಗ್ಗೆ ಈ ಹದೀಸ್ ಎಚ್ಚರಿಸುತ್ತದೆ.
  5. ಧಾರ್ಮಿಕವಾಗಿ ಅಂಗೀಕರಿಸಲಾದ ಮಂತ್ರಗಳ ಹೊರತು ಉಳಿದ ಮಂತ್ರಗಳೆಲ್ಲವೂ ನಿಷಿದ್ಧ ಮತ್ತು ಶಿರ್ಕ್ (ದೇವಸಹಭಾಗಿತ್ವ) ಆಗಿವೆ ಎಂದು ಈ ಹದೀಸ್ ತಿಳಿಸುತ್ತದೆ.
  6. ಹೃದಯವನ್ನು ಅಲ್ಲಾಹನೊಂದಿಗೆ ಜೋಡಿಸಬೇಕು; ಏಕೆಂದರೆ ಲಾಭ ಮತ್ತು ಹಾನಿ ಮಾಡುವ ಅಧಿಕಾರವಿರುವುದು ಅವನಿಗೆ ಮಾತ್ರ. ಅದರಲ್ಲಿ ಅವನಿಗೆ ಯಾವುದೇ ಸಹಭಾಗಿಗಳಿಲ್ಲ. ಒಳಿತನ್ನು ಮಾಡುವುದು ಮತ್ತು ಕೆಡುಕನ್ನು ದೂರೀಕರಿಸುವುದು ಅಲ್ಲಾಹನಲ್ಲದೆ ಇನ್ನಾರೂ ಅಲ್ಲ.
  7. ಅನುಮತಿಸಲಾದ ಮಂತ್ರಗಳಿಗೆ ಮೂರು ಷರತ್ತುಗಳಿವೆ: 1. ಅವು ಕಾರಣಗಳಾಗಿವೆ ಮತ್ತು ಅಲ್ಲಾಹನ ಅನುಮತಿಯ ವಿನಾ ಅವು ಉಪಕಾರ ಮಾಡುವುದಿಲ್ಲ ಎಂದು ವಿಶ್ವಾಸವಿಡುವುದು. 2. ಅವು ಕುರ್‌ಆನ್ ವಚನಗಳು, ಅಲ್ಲಾಹನ ಹೆಸರು ಮತ್ತು ಗುಣಲಕ್ಷಣಗಳು, ಪ್ರವಾದಿಯವರು ಕಲಿಸಿದ ಪ್ರಾರ್ಥನೆಗಳು ಮತ್ತು ಧಾರ್ಮಿಕವಾಗಿ ಅಂಗೀಕರಿಸಲಾದ ಪ್ರಾರ್ಥನೆಗಳಾಗಿರುವುದು. 3. ಅವು ಅರ್ಥವಾಗುವ ಭಾಷೆಯಲ್ಲಿರುವುದು. ತಗಡು ಮತ್ತು ಕಣ್ಕಟ್ಟು ತಂತ್ರಗಳನ್ನು ಹೊಂದಿರದಿರುವುದು.