- ಬಾಹ್ಯವಾಗಿಯೂ, ಆಂತರಿಕವಾಗಿಯೂ ಅಲ್ಲಾಹನನ್ನು ನಿರಂತರ ಸ್ಮರಿಸುವುದು ಅಲ್ಲಾಹನಿಗೆ ಸಮೀಪವಾಗುವ ಮತ್ತು ಅವನ ಬಳಿ ಅತ್ಯಂತ ಪ್ರಯೋಜನಕಾರಿಯಾದ ಕರ್ಮವಾಗಿದೆ.
- ಎಲ್ಲಾ ಕರ್ಮಗಳನ್ನೂ ನಿಯಮಗೊಳಿಸಲಾಗಿರುವುದು ಅಲ್ಲಾಹನ ಸ್ಮರಣೆಯನ್ನು ನೆಲೆನಿಲ್ಲಿಸುವುದಕ್ಕಾಗಿದೆ. ಅಲ್ಲಾಹು ಹೇಳಿದನು: "ನನ್ನ ಸ್ಮರಣೆಗಾಗಿ ನಮಾಝನ್ನು ಸಂಸ್ಥಾಪಿಸಿರಿ." ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಕಅಬಾಲಯದಲ್ಲಿ ತವಾಫ್ ಮಾಡುವುದು, ಸಫಾ-ಮರ್ವಾಗಳ ಮಧ್ಯೆ ಪ್ರದಕ್ಷಿಣೆ ಮಾಡುವುದು, ಜಮ್ರಗಳಿಗೆ ಕಲ್ಲೆಸೆಯುವುದು ಮುಂತಾದ ಎಲ್ಲವನ್ನೂ ಅಲ್ಲಾಹನ ಸ್ಮರಣೆಯನ್ನು ನೆಲೆನಿಲ್ಲಿಸುವುದಕ್ಕಾಗಿ ನಿಶ್ಚಯಿಸಲಾಗಿದೆ." [ಅಬೂದಾವೂದ್ ಮತ್ತು ತಿರ್ಮಿದಿ].
- ಇಝ್ಝ್ ಬಿನ್ ಅಬ್ದುಸ್ಸಲಾಂ ತಮ್ಮ 'ಅಲ್-ಕವಾಇದ್'ನಲ್ಲಿ ಹೇಳಿದರು: ಈ ಹದೀಸ್ ಸೂಚಿಸುವುದೇನೆಂದರೆ, ಎಲ್ಲಾ ಆರಾಧನೆಗಳಲ್ಲೂ ಅವುಗಳ ಪ್ರತಿಫಲವು ಆ ಆರಾಧನೆಯನ್ನು ನಿರ್ವಹಿಸಲು ವ್ಯಯಿಸುವ ಶ್ರಮಕ್ಕೆ ಅನುಗುಣವಾಗಿರುವುದಿಲ್ಲ. ಬದಲಿಗೆ, ಅಲ್ಲಾಹು ದೊಡ್ಡ ಕರ್ಮಗಳಿಗೆ ನೀಡುವ ಪ್ರತಿಫಲಕ್ಕಿಂತ ಹೆಚ್ಚಿನ ಪ್ರತಿಫಲವನ್ನು ಸಣ್ಣ ಕರ್ಮಗಳಿಗೆ ನೀಡಬಹುದು. ಕರ್ಮದ ಶ್ರೇಷ್ಠತೆಗೆ ಅನುಗುಣವಾಗಿ ಅವುಗಳಿಗಿರುವ ಪ್ರತಿಫಲವು ಹೆಚ್ಚು ಕಡಿಮೆಯಾಗುತ್ತದೆ.
- ಮುನಾವಿ ಫೈದುಲ್ ಕದೀರ್‌ನಲ್ಲಿ ಹೇಳಿದರು: ಇಲ್ಲಿ ಅಭಿಸಂಬೋಧಿತರಾಗಿರುವ ಜನರಿಗೆ ದೇವಸ್ಮರಣೆಯು ಅತಿಶ್ರೇಷ್ಠ ಕರ್ಮವಾಗಿದೆ ಎಂಬ ಅರ್ಥದಲ್ಲಿ ಈ ಹದೀಸನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಏಕೆಂದರೆ, ಒಂದು ವೇಳೆ ಅಭಿಸಂಬೋಧಿತ ಜನರು ಯುದ್ಧರಂಗದಲ್ಲಿ ಇಸ್ಲಾಂ ಧರ್ಮಕ್ಕೆ ಪ್ರಯೋಜನ ನೀಡುವ ಶೂರರು ಮತ್ತು ವೀರರಾಗಿದ್ದರೆ, ಅವರಿಗೆ ಜಿಹಾದ್ ಶ್ರೇಷ್ಠವೆಂದು ಹೇಳಲಾಗುತ್ತಿತ್ತು. ಅಥವಾ ಅವರು ತಮ್ಮ ಸಂಪತ್ತಿನ ಮೂಲಕ ಬಡವರಿಗೆ ಪ್ರಯೋಜನ ನೀಡುವ ಶ್ರೀಮಂತರಾಗಿದ್ದರೆ, ದಾನ-ಧರ್ಮವು ಶ್ರೇಷ್ಠವೆಂದು ಹೇಳಲಾಗುತ್ತಿತ್ತು. ಅವರು ಹಜ್ಜ್ ನಿರ್ವಹಿಸಲು ಸಾಮರ್ಥ್ಯವಿರುವವರಾಗಿದ್ದರೆ ಹಜ್ಜ್ ಶ್ರೇಷ್ಠವೆಂದು ಹೇಳಲಾಗುತ್ತಿತ್ತು. ಅಥವಾ ಅವರು ತಂದೆ-ತಾಯಿ ಇರುವವರಾಗಿದ್ದರೆ ತಂದೆ-ತಾಯಿಗೆ ಒಳಿತು ಮಾಡುವುದು ಶ್ರೇಷ್ಠವೆಂದು ಹೇಳಲಾಗುತ್ತಿತ್ತು. ಈ ರೀತಿಯಲ್ಲಿ ನಮಗೆ ವಿಭಿನ್ನ ವರದಿಗಳನ್ನು ಹೊಂದಾಣಿಕೆ ಮಾಡಬಹುದಾಗಿದೆ.
- ನಾಲಗೆಯ ಮೂಲಕ ಉಚ್ಛರಿಸುವ ಮತ್ತು ಹೃದಯದಲ್ಲಿ ಅರ್ಥವನ್ನು ಗ್ರಹಿಸುವ ದೇವಸ್ಮರಣೆಯು ಪರಿಪೂರ್ಣ ದೇವಸ್ಮರಣೆಯಾಗಿದೆ. ನಂತರ, ಆಲೋಚನೆ ಮಾಡುವುದು ಮುಂತಾದ ಹೃದಯದಲ್ಲಿ ಮಾತ್ರವಿರುವ ದೇವಸ್ಮರಣೆ. ನಂತರ, ನಾಲಗೆಯಲ್ಲಿ ಮಾತ್ರವಿರುವ ದೇವಸ್ಮರಣೆ. ಅಲ್ಲಾಹು ಇಚ್ಛಿಸಿದರೆ, ಈ ಎಲ್ಲಾ ವಿಧಗಳಿಗೂ ಪ್ರತಿಫಲವಿದೆ.
- ಮುಸಲ್ಮಾನನು ಬೆಳಗ್ಗೆ ಮತ್ತು ಸಂಜೆ ಪಠಿಸುವ ಸ್ಮರಣೆಗಳು, ಮಸೀದಿ, ಮನೆ ಮತ್ತು ಶೌಚಾಲಯವನ್ನು ಪ್ರವೇಶಿಸುವಾಗ ಮತ್ತು ಅಲ್ಲಿಂದ ಹೊರ ಬರುವಾಗ ಪಠಿಸುವ ಸ್ಮರಣೆಗಳು ಮುಂತಾದ ನಿರ್ದಿಷ್ಟ ಸಮಯಗಳಲ್ಲಿ ಪಠಿಸುವ ಸ್ಮರಣೆಗಳನ್ನು ಪಠಿಸುತ್ತಿದ್ದರೆ ಅವನು ಅಲ್ಲಾಹನನ್ನು ಅತಿಹೆಚ್ಚು ಸ್ಮರಿಸುವವರಲ್ಲಿ ಸೇರುತ್ತಾನೆ.