/ ಅಂಧಕಾರ ತುಂಬಿದ ರಾತ್ರಿಗಳ ತುಂಡುಗಳಂತಿರುವ ಪರೀಕ್ಷೆಗಳು ಬರುವುದಕ್ಕೆ ಮೊದಲು ಸತ್ಕರ್ಮಗಳನ್ನು ಮಾಡಲು ಧಾವಿಸಿರಿ...

ಅಂಧಕಾರ ತುಂಬಿದ ರಾತ್ರಿಗಳ ತುಂಡುಗಳಂತಿರುವ ಪರೀಕ್ಷೆಗಳು ಬರುವುದಕ್ಕೆ ಮೊದಲು ಸತ್ಕರ್ಮಗಳನ್ನು ಮಾಡಲು ಧಾವಿಸಿರಿ...

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಂಧಕಾರ ತುಂಬಿದ ರಾತ್ರಿಗಳ ತುಂಡುಗಳಂತಿರುವ ಪರೀಕ್ಷೆಗಳು ಬರುವುದಕ್ಕೆ ಮೊದಲು ಸತ್ಕರ್ಮಗಳನ್ನು ಮಾಡಲು ಧಾವಿಸಿರಿ. ಆಗ ಬೆಳಗ್ಗೆ ಸತ್ಯವಿಶ್ವಾಸಿಯಾಗಿದ್ದ ವ್ಯಕ್ತಿ ಸಂಜೆಯಾದಾಗ ಸತ್ಯನಿಷೇಧಿಯಾಗುವನು ಅಥವಾ ಸಂಜೆ ಸತ್ಯವಿಶ್ವಾಸಿಯಾಗಿದ್ದ ವ್ಯಕ್ತಿ ಬೆಳಗಾದಾಗ ಸತ್ಯನಿಷೇಧಿಯಾಗುವನು. ಭೌತಿಕ ಲಾಭಕ್ಕಾಗಿ ಅವನು ತನ್ನ ಧರ್ಮವನ್ನು ಮಾರಾಟ ಮಾಡುವನು."
رواه مسلم

ವಿವರಣೆ

ಸತ್ಕರ್ಮಗಳನ್ನು ತಡೆಯುವ ಮತ್ತು ಹಿಮ್ಮೆಟ್ಟಿಸುವ ಪರೀಕ್ಷೆಗಳು ಮತ್ತು ಸಂಶಯಗಳು ಉದ್ಭವಿಸಿ, ಸತ್ಕರ್ಮಗಳನ್ನು ನಿರ್ವಹಿಸಲು ಸಾಧ್ಯವಾಗದ ಅಥವಾ ಅದನ್ನು ಬಿಟ್ಟು ಬೇರೆ ಕೆಲಸಗಳಲ್ಲಿ ನಿರತರಾಗುವ ಮೊದಲು ಸತ್ಕರ್ಮಗಳನ್ನು ನಿರ್ವಹಿಸಲು ಆತುರಪಡುವಂತೆ ಮತ್ತು ಅವುಗಳನ್ನು ಹೆಚ್ಚು ಹೆಚ್ಚಾಗಿ ನಿರ್ವಹಿಸುವಂತೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಒತ್ತಾಯಿಸುತ್ತಿದ್ದಾರೆ. ಆ ಪರೀಕ್ಷೆಗಳು ರಾತ್ರಿಯ ತುಂಡುಗಳಂತಿರುವ ಅಂಧಕಾರಗಳಾಗಿದ್ದು, ಅದರಲ್ಲಿ ಸತ್ಯ ಮತ್ತು ಅಸತ್ಯವು ಮಿಶ್ರವಾಗಿದೆ. ಅವುಗಳನ್ನು ವಿವೇಚಿಸಿ ತಿಳಿಯಲು ಜನರಿಗೆ ಕಷ್ಟವಾಗುವುದು. ಅವುಗಳ ತೀವ್ರತೆಯಿಂದಾಗಿ ಮನುಷ್ಯನು ಗೊತ್ತುಗುರಿಯಿಲ್ಲದೆ ಅಲೆಯುವನು. ಎಲ್ಲಿಯವರೆಗೆಂದರೆ, ಬೆಳಗ್ಗೆ ಸತ್ಯವಿಶ್ವಾಸಿಯಾಗಿದ್ದ ವ್ಯಕ್ತಿ ಸಂಜೆಯಾದಾಗ ಸತ್ಯನಿಷೇಧಿಯಾಗುವನು ಅಥವಾ ಸಂಜೆ ಸತ್ಯವಿಶ್ವಾಸಿಯಾಗಿದ್ದ ವ್ಯಕ್ತಿ ಬೆಳಗಾದಾಗ ಸತ್ಯನಿಷೇಧಿಯಾಗುವನು. ತಾತ್ಕಾಲಿಕ ಭೌತಿಕ ಆನಂದಕ್ಕಾಗಿ ಅವನು ತನ್ನ ಧರ್ಮವನ್ನು ತೊರೆಯುವನು.

Hadeeth benefits

  1. ಧರ್ಮವನ್ನು ಬಿಗಿಯಾಗಿ ಹಿಡಿಯುವುದು ಮತ್ತು ಅಡ್ಡಿಗಳು ತಡೆಯಾಗಿ ಬರುವ ಮೊದಲು ಸತ್ಕರ್ಮಗಳನ್ನು ನಿರ್ವಹಿಸಲು ಧಾವಿಸುವುದು ಕಡ್ಡಾಯವಾಗಿದೆ.
  2. ಅಂತ್ಯಕಾಲದಲ್ಲಿ ದಾರಿ ತಪ್ಪಿಸುವಂತಹ ಪರೀಕ್ಷೆಗಳು ನಿರಂತರವಾಗಿ ಬರುತ್ತವೆ ಮತ್ತು ಒಂದು ಪರೀಕ್ಷೆಯು ಮುಗಿದ ತಕ್ಷಣ ಅದರ ಹಿಂದೆಯೇ ಇನ್ನೊಂದು ಪರೀಕ್ಷೆಯು ಬರಲಿದೆಯೆಂದು ಸೂಚನೆ ನೀಡಲಾಗಿದೆ.
  3. ಒಬ್ಬ ವ್ಯಕ್ತಿಯ ಧಾರ್ಮಿಕತೆಯು ದುರ್ಬಲವಾಗಿದ್ದರೆ ಮತ್ತು ಅವನು ಹಣ ಅಥವಾ ಇತರ ಭೌತಿಕ ಲಾಭಗಳಿಗೆ ಬದಲಾಗಿ ತನ್ನ ಧರ್ಮವನ್ನು ಉಪೇಕ್ಷಿಸಿದರೆ, ಇದು ಅವನು ದಾರಿತಪ್ಪಲು, ಧರ್ಮವನ್ನು ತ್ಯಜಿಸಲು ಮತ್ತು ಪರೀಕ್ಷೆಗಳಿಗೆ ಬಲಿಯಾಗಲು ಕಾರಣವಾಗುತ್ತದೆ.
  4. ಸತ್ಕರ್ಮಗಳು ಪರೀಕ್ಷೆಗಳಿಂದ ಪಾರಾಗಲು ಕಾರಣವಾಗುತ್ತವೆ ಎಂಬುದಕ್ಕೆ ಈ ಹದೀಸಿನಲ್ಲಿ ಪುರಾವೆಯಿದೆ.
  5. ಪರೀಕ್ಷೆಗಳು ಎರಡು ವಿಧಗಳಲ್ಲಿವೆ: ಸಂಶಯಾತ್ಮಕ ವಿಷಯಗಳಿಗೆ ಸಂಬಂಧಿಸಿದ ಪರೀಕ್ಷೆಗಳು—ಇದಕ್ಕೆ ಮದ್ದು ಜ್ಞಾನವನ್ನು ಸಂಪಾದಿಸುವುದು. ಮೋಹಗಳಿಗೆ ಸಂಬಂಧಿಸಿದ ಪರೀಕ್ಷೆಗಳು—ಇದಕ್ಕೆ ಮದ್ದು ಸತ್ಯವಿಶ್ವಾಸ ಮತ್ತು ತಾಳ್ಮೆ.
  6. ಕರ್ಮಗಳು ಕಡಿಮೆಯಿರುವವರು ಬೇಗ ಪರೀಕ್ಷೆಗಳಿಗೆ ಗುರಿಯಾಗುತ್ತಾರೆ ಮತ್ತು ಕರ್ಮಗಳು ಹೆಚ್ಚಿರುವವರು ತಮ್ಮ ಕರ್ಮಗಳಿಂದ ವಂಚಿತರಾಗದೆ ಅತ್ಯಧಿಕ ಕರ್ಮಗಳನ್ನು ನಿರ್ವಹಿಸಬೇಕೆಂದು ಈ ಹದೀಸ್ ಸೂಚಿಸುತ್ತದೆ.