/ ಸತ್ಯವಿಶ್ವಾಸಿಯ ವಿಷಯವು ಅತ್ಯಂತ ವಿಸ್ಮಯಕಾರಿಯಾಗಿದೆ! ಅವನ ಎಲ್ಲಾ ವಿಷಯಗಳೂ ಅವನಿಗೆ ಒಳಿತಾಗಿವೆ. ಇದು ಒಬ್ಬ ಸತ್ಯವಿಶ್ವಾಸಿಗಲ್ಲದೆ ಇನ್ನಾರಿಗೂ ಇಲ್ಲ...

ಸತ್ಯವಿಶ್ವಾಸಿಯ ವಿಷಯವು ಅತ್ಯಂತ ವಿಸ್ಮಯಕಾರಿಯಾಗಿದೆ! ಅವನ ಎಲ್ಲಾ ವಿಷಯಗಳೂ ಅವನಿಗೆ ಒಳಿತಾಗಿವೆ. ಇದು ಒಬ್ಬ ಸತ್ಯವಿಶ್ವಾಸಿಗಲ್ಲದೆ ಇನ್ನಾರಿಗೂ ಇಲ್ಲ...

ಸುಹೈಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸತ್ಯವಿಶ್ವಾಸಿಯ ವಿಷಯವು ಅತ್ಯಂತ ವಿಸ್ಮಯಕಾರಿಯಾಗಿದೆ! ಅವನ ಎಲ್ಲಾ ವಿಷಯಗಳೂ ಅವನಿಗೆ ಒಳಿತಾಗಿವೆ. ಇದು ಒಬ್ಬ ಸತ್ಯವಿಶ್ವಾಸಿಗಲ್ಲದೆ ಇನ್ನಾರಿಗೂ ಇಲ್ಲ. ಅವನಿಗೇನಾದರೂ ಒಳ್ಳೆಯದು ಸಂಭವಿಸಿದರೆ ಅವನು ಕೃತಜ್ಞನಾಗುತ್ತಾನೆ, ಅದು ಅವನಿಗೆ ಒಳಿತಾಗಿದೆ. ಇನ್ನು ಅವನಿಗೇನಾದರೂ ತೊಂದರೆ ಬಾಧಿಸಿದರೆ ಅವನು ತಾಳ್ಮೆ ತೋರುತ್ತಾನೆ. ಅದು ಕೂಡ ಅವನಿಗೆ ಒಳಿತಾಗಿದೆ."
رواه مسلم

ವಿವರಣೆ

ಸತ್ಯವಿಶ್ವಾಸಿಯ ಅವಸ್ಥೆಗಳ ಮತ್ತು ಸ್ಥಿತಿಗತಿಗಳ ಬಗ್ಗೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೆಚ್ಚುಗೆಯ ರೂಪದಲ್ಲಿ ಅಚ್ಚರಿಪಡುತ್ತಾರೆ.ಏಕೆಂದರೆ ಅವನ ಎಲ್ಲಾ ಸ್ಥಿತಿಗತಿಗಳು ಒಳಿತಾಗಿವೆ ಮತ್ತು ಈ ಒಳಿತುಗಳು ಸತ್ಯವಿಶ್ವಾಸಿಯ ಹೊರತು ಇನ್ನಾರಿಗೂ ಇಲ್ಲ. ಅವನಿಗೆ ಒಳ್ಳೆಯದು ಸಂಭವಿಸಿದರೆ ಅವನು ಅಲ್ಲಾಹನಿಗೆ ಕೃತಜ್ಞನಾಗುತ್ತಾನೆ. ಆಗ ಆ ಕೃತಜ್ಞತೆಯ ಮೂಲಕ ಅವನು ಪ್ರತಿಫಲವನ್ನು ಪಡೆಯುತ್ತಾನೆ. ಇನ್ನು ಅವನಿಗೆ ತೊಂದರೆ ಬಾಧಿಸಿದರೆ ಅವನು ತಾಳ್ಮೆ ತೋರುತ್ತಾನೆ ಮತ್ತು ಅಲ್ಲಾಹನಲ್ಲಿ ಪ್ರತಿಫಲವನ್ನು ಅಪೇಕ್ಷಿಸುತ್ತಾನೆ. ಆಗ ಆ ತಾಳ್ಮೆಯ ಮೂಲಕ ಅವನು ಪ್ರತಿಫಲವನ್ನು ಪಡೆಯುತ್ತಾನೆ. ಅವನು ಎಲ್ಲಾ ಅವಸ್ಥೆಗಳಲ್ಲೂ ಪ್ರತಿಫಲ ಪಡೆಯುತ್ತಲೇ ಇರುತ್ತಾನೆ.

Hadeeth benefits

  1. ಒಳಿತಾಗುವಾಗ ಕೃತಜ್ಞರಾಗುವುದು ಮತ್ತು ತೊಂದರೆ ಬಾಧಿಸಿದಾಗ ತಾಳ್ಮೆ ತೋರುವುದರ ಶ್ರೇಷ್ಠತೆಯನ್ನು ವಿವರಿಸಲಾಗಿದೆ. ಯಾರು ಹೀಗೆ ನಡೆದುಕೊಳ್ಳುತ್ತಾರೋ ಅವರು ದ್ವಿಲೋಕಗಳ ಪ್ರತಿಫಲವನ್ನು ಪಡೆಯುತ್ತಾರೆ. ಯಾರು ಅನುಗ್ರಹ ದೊರೆಯುವಾಗ ಕೃತಜ್ಞರಾಗುವುದಿಲ್ಲವೋ ಮತ್ತು ವಿಪತ್ತು ಸಂಭವಿಸುವಾಗ ತಾಳ್ಮೆ ತೋರುವುದಿಲ್ಲವೋ ಅವರು ಪ್ರತಿಫಲವನ್ನು ಕಳೆದುಕೊಳ್ಳುತ್ತಾರೆ ಮತ್ತು ಪಾಪವನ್ನು ವಹಿಸುತ್ತಾರೆ.
  2. ಸತ್ಯವಿಶ್ವಾಸದ ಶ್ರೇಷ್ಠತೆಯನ್ನು ಮತ್ತು ಸತ್ಯವಿಶ್ವಾಸಿಗಳಿಗಲ್ಲದೆ ಇನ್ನಾರಿಗೂ ಎಲ್ಲಾ ಅವಸ್ಥೆಗಳಲ್ಲೂ ಪ್ರತಿಫಲ ದೊರೆಯುವುದಿಲ್ಲ ಎಂದು ತಿಳಿಸಲಾಗಿದೆ.
  3. ಒಳಿತಾಗುವಾಗ ಕೃತಜ್ಞರಾಗುವುದು ಮತ್ತು ತೊಂದರೆ ಬಾಧಿಸಿದಾಗ ತಾಳ್ಮೆ ತೋರುವುದು ಸತ್ಯವಿಶ್ವಾಸಿಗಳ ಲಕ್ಷಣವಾಗಿದೆ.
  4. ಅಲ್ಲಾಹನ ವಿಧಿ-ನಿರ್ಣಯದಲ್ಲಿರುವ ವಿಶ್ವಾಸವು ಸತ್ಯವಿಶ್ವಾಸಿಯನ್ನು ಎಲ್ಲಾ ಪರಿಸ್ಥಿತಿಗಳಲ್ಲೂ ಪೂರ್ಣ ಸಂತೃಪ್ತಿ ಸೂಚಿಸುವಂತೆ ಮಾಡುತ್ತದೆ. ಆದರೆ, ಸತ್ಯವಿಶ್ವಾಸಿಗಳಲ್ಲದ ಜನರ ವಿಷಯವು ಇದಕ್ಕೆ ವಿರುದ್ಧವಾಗಿದೆ. ಅವರಿಗೆ ತೊಂದರೆಗಳು ಬಾಧಿಸುವಾಗ ಅವರು ಪೂರ್ಣ ಅತೃಪ್ತಿಯನ್ನು ಸೂಚಿಸುತ್ತಾರೆ. ಅವರಿಗೆ ಅಲ್ಲಾಹನಿಂದ ಏನಾದರೂ ಅನುಗ್ರಹವು ದೊರೆತರೆ, ಅವರು ಅಲ್ಲಾಹನ ಆಜ್ಞೋಲ್ಲಂಘನೆ ಮಾಡುವುದಕ್ಕಾಗಿ ಅದನ್ನು ವಿನಿಯೋಗಿಸುವುದು ಮಾತ್ರವಲ್ಲದೆ, ಅಲ್ಲಾಹನ ಅನುಸರಣೆ ಮಾಡುವುದನ್ನು ಬಿಟ್ಟು ಬೇರೆ ವಿಷಯಗಳಲ್ಲಿ ತಲ್ಲೀನರಾಗುತ್ತಾರೆ.