/ ನಿಶ್ಚಯವಾಗಿಯೂ ಧರ್ಮವು ಸರಳವಾಗಿದೆ. ಯಾರಾದರೂ ಧರ್ಮವನ್ನು ಕಠಿಣಗೊಳಿಸಲು ಪ್ರಯತ್ನಿಸಿದರೆ ಅದು ಅವನನ್ನು ಸೋಲಿಸದೆ ಬಿಡುವುದಿಲ್ಲ. ಆದ್ದರಿಂದ ಸರಿಯಾದುದನ್ನು ಅರಸಿರಿ, ಸಾಧ್ಯವಾದಷ್ಟು ಹತ್ತಿರವಾಗಿರಿ...

ನಿಶ್ಚಯವಾಗಿಯೂ ಧರ್ಮವು ಸರಳವಾಗಿದೆ. ಯಾರಾದರೂ ಧರ್ಮವನ್ನು ಕಠಿಣಗೊಳಿಸಲು ಪ್ರಯತ್ನಿಸಿದರೆ ಅದು ಅವನನ್ನು ಸೋಲಿಸದೆ ಬಿಡುವುದಿಲ್ಲ. ಆದ್ದರಿಂದ ಸರಿಯಾದುದನ್ನು ಅರಸಿರಿ, ಸಾಧ್ಯವಾದಷ್ಟು ಹತ್ತಿರವಾಗಿರಿ...

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಶ್ಚಯವಾಗಿಯೂ ಧರ್ಮವು ಸರಳವಾಗಿದೆ. ಯಾರಾದರೂ ಧರ್ಮವನ್ನು ಕಠಿಣಗೊಳಿಸಲು ಪ್ರಯತ್ನಿಸಿದರೆ ಅದು ಅವನನ್ನು ಸೋಲಿಸದೆ ಬಿಡುವುದಿಲ್ಲ. ಆದ್ದರಿಂದ ಸರಿಯಾದುದನ್ನು ಅರಸಿರಿ, ಸಾಧ್ಯವಾದಷ್ಟು ಹತ್ತಿರವಾಗಿರಿ ಮತ್ತು (ಪ್ರತಿಫಲದ) ಶುಭವಾರ್ತೆಯನ್ನು ಪಡೆಯಿರಿ; ಬೆಳಗ್ಗೆ, ಸಂಜೆ ಮತ್ತು ರಾತ್ರಿಯ ಕೊನೆಯ ಆಯಾಮದಲ್ಲಿ ಆರಾಧನೆ ಮಾಡುತ್ತಾ ಸಹಾಯವನ್ನು ಯಾಚಿಸಿರಿ."
رواه البخاري

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ,ಇಸ್ಲಾಂ ಧರ್ಮವನ್ನು ಎಲ್ಲಾ ವಿಷಯಗಳಲ್ಲೂ ಸರಳ ಮತ್ತು ಸುಗಮವಾಗಿರುವ ರೀತಿಯಲ್ಲಿ ನಿರ್ಮಿಸಲಾಗಿದೆ. ಅಶಕ್ತತೆಯ ಸಂದರ್ಭಗಳಲ್ಲಿ ಮತ್ತು ಅತ್ಯಗತ್ಯ ಸಂದರ್ಭಗಳಲ್ಲಿ ಸರಳತೆಗೆ ಹೆಚ್ಚು ಒತ್ತು ನೀಡಲಾಗಿದೆ. ಏಕೆಂದರೆ, ಮಿತತ್ವವನ್ನು ತೊರೆಯುವುದು ಮತ್ತು ಧಾರ್ಮಿಕ ವಿಷಯಗಳಲ್ಲಿ ಆಳವಾಗಿ ತೊಡಗಿಕೊಳ್ಳುವುದು ಅಶಕ್ತತೆಗೆ ಮತ್ತು ಕರ್ಮಗಳನ್ನು ಸಂಪೂರ್ಣವಾಗಿ ಅಥವಾ ಆಂಶಿಕವಾಗಿ ತೊರೆಯುವುದಕ್ಕೆ ಕಾರಣವಾಗುತ್ತದೆ. . ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತೀವ್ರ ನಿಲುವನ್ನು ತೊರೆದು ಮಿತತ್ವವನ್ನು ಪಾಲಿಸಲು ಪ್ರೋತ್ಸಾಹಿಸುತ್ತಾರೆ. ಮನುಷ್ಯನು ತನಗೆ ಆದೇಶಿಸಲಾಗಿರುವ ವಿಷಯಗಳಲ್ಲಿ ಉಪೇಕ್ಷೆ ತೋರಬಾರದು ಮತ್ತು ತನಗೆ ಸಾಮರ್ಥ್ಯವಿಲ್ಲದ ವಿಷಯಗಳನ್ನು ತನ್ನ ಮೇಲೆ ಹೊರಿಸಬಾರದು. ಅವನು ಒಂದು ಕರ್ಮವನ್ನು ಪೂರ್ಣ ರೂಪದಲ್ಲಿ ನಿರ್ವಹಿಸಲು ಅಶಕ್ತನಾದರೆ ಅವನಿಗೆ ಸಾಧ್ಯವಾಗುವ ರೂಪದಲ್ಲಿ ಅದನ್ನು ನಿರ್ವಹಿಸಬೇಕು. ಕರ್ಮವನ್ನು ಪೂರ್ಣ ರೂಪದಲ್ಲಿ ನಿರ್ವಹಿಸಲು ಸಾಧ್ಯವಾಗದಿದ್ದರೂ ಸಹ, ಅವುಗಳನ್ನು ಕನಿಷ್ಟ ರೂಪದಲ್ಲಿ ನಿರಂತರವಾಗಿ ನಿರ್ವಹಿಸುವವರಿಗೆ ಹೇರಳ ಪ್ರತಿಫಲವಿದೆಯೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಶುಭವಾರ್ತೆಯನ್ನು ತಿಳಿಸಿದ್ದಾರೆ. ಏಕೆಂದರೆ ಅಶಕ್ತತೆಗೆ ಅವರು ಕಾರಣರಲ್ಲವೆಂದಾದರೆ ಅದು ಅವರ ಪ್ರತಿಫಲದಲ್ಲಿ ಕಡಿತ ಉಂಟುಮಾಡುವುದಿಲ್ಲ. ಇಹಲೋಕವು ವಾಸ್ತವದಲ್ಲಿ ಪ್ರಯಾಣ ಮತ್ತು ಪರಲೋಕಕ್ಕೆ ಸಾಗುವ ಸ್ಥಳವಾಗಿರುವುದರಿಂದ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅತ್ಯಂತ ಉತ್ಸಾಹವಿರುವ ಈ ಮೂರು ಸಮಯಗಳಲ್ಲಿ ರೂಢಿಯಾಗಿ ಆರಾಧನೆ ಮಾಡಲು ಅಲ್ಲಾಹನಲ್ಲಿ ಸಹಾಯ ಬೇಡಬೇಕೆಂದು ನಮಗೆ ಆಜ್ಞಾಪಿಸಿದ್ದಾರೆ: ಒಂದು: 'ಗದ್ವ' ಅಂದರೆ ಮುಂಜಾನೆಯ ಸಮಯದಲ್ಲಿ ಆರಾಧಿಸುವುದು. ಇದು ಫಜ್ರ್ ನಮಾಝ್‌ ಮತ್ತು ಸೂರ್ಯೋದಯದ ನಡುವಿನ ಸಮಯವಾಗಿದೆ. ಎರಡು: 'ರೌಹ' ಅಂದರೆ ಮಧ್ಯಾಹ್ನದ ನಂತರದ ಸಮಯದಲ್ಲಿ ಆರಾಧಿಸುವುದು. ಮೂರು: 'ದುಲ್ಜ' ಅಂದರೆ ರಾತ್ರಿಯಲ್ಲಿ ಪೂರ್ಣವಾಗಿ ಅಥವಾ ಆಂಶಿಕವಾಗಿ ಆರಾಧಿಸುವುದು. ರಾತ್ರಿಯಲ್ಲಿ ಕರ್ಮವೆಸಗುವುದು ಹಗಲಲ್ಲಿ ಕರ್ಮವೆಸಗುವುದಕ್ಕಿಂತಲೂ ಕಷ್ಟವಾಗಿರುವುದರಿಂದ 'ದುಲ್ಜ'ದ ಒಂದು ಭಾಗದಲ್ಲಿ ಎಂದು ಹೇಳಲಾಗಿದೆ.

Hadeeth benefits

  1. ಇಸ್ಲಾಂ ಧರ್ಮದ ಸರಳತೆ, ಸಹಿಷ್ಣುತೆ ಮತ್ತು ಅತಿರೇಕ ಹಾಗೂ ಉಪೇಕ್ಷೆಗಳ ನಡುವಿನ ಅದರ ಮಿತತ್ವವನ್ನು ತಿಳಿಸಲಾಗಿದೆ.
  2. ಮನುಷ್ಯನು ತನಗೆ ಸಾಧ್ಯವಾಗುವ ರೂಪದಲ್ಲಿ, ಯಾವುದೇ ಅಸಡ್ಡೆ ಅಥವಾ ಕರ್ಕಶತೆಯಿಲ್ಲದೆ ಕರ್ಮವೆಸಗಬೇಕೆಂದು ತಿಳಿಸಲಾಗಿದೆ.
  3. ಮನುಷ್ಯನು ಹೆಚ್ಚು ಉತ್ಸಾಹವಿರುವ ಸಮಯದಲ್ಲಿ ಆರಾಧನಾ ನಿರತನಾಗಬೇಕೆಂದು ತಿಳಿಸಲಾಗಿದೆ. ಈ ಮೂರು ಸಮಯಗಳಲ್ಲಿ ದೇಹವು ಆರಾಧನೆ ಮಾಡಲು ಹೆಚ್ಚು ಉತ್ಸಾಹದಲ್ಲಿರುತ್ತದೆ.
  4. ಇಬ್ನ್ ಹಜರ್ ಅಸ್ಕಲಾನಿ ಹೇಳಿದರು: "ಇದು ತನ್ನ ಉದ್ದೇಶಿತ ಸ್ಥಳಕ್ಕೆ ಪ್ರಯಾಣ ಮಾಡುವ ಪ್ರಯಾಣಿಕನೊಂದಿಗೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಾತನಾಡಿದಂತಿದೆ. ಈ ಮೂರು ಸಮಯಗಳು ಪ್ರಯಾಣಿಕನಿಗೆ ಸಂಬಂಧಿಸಿದಂತೆ ಅತ್ಯುತ್ತಮ ಸಮಯಗಳಾಗಿವೆ. ಆದ್ದರಿಂದ ಅವನು ಉತ್ಸಾಹದಲ್ಲಿರುವ ಸಮಯಗಳ ಬಗ್ಗೆ ಅವರು ಸೂಚನೆ ನೀಡಿದ್ದಾರೆ. ಏಕೆಂದರೆ ಪ್ರಯಾಣಿಕನು ಹಗಲು ರಾತ್ರಿ ಪೂರ್ತಿಯಾಗಿ ಪ್ರಯಾಣ ಮಾಡಿದರೆ ಅವನು ನಿಶ್ಶಕ್ತನಾಗಿ ಪ್ರಯಾಣವನ್ನು ಅರ್ಧದಲ್ಲೇ ಮೊಟಕುಗೊಳಿಸಬಹುದು. ಆದರೆ ಅವನು ಈ ಉತ್ಸಾಹದ ಸಮಯಗಳಲ್ಲಿ ಪ್ರಯಾಣ ಮಾಡಲು ಪ್ರಯತ್ನಿಸಿದರೆ, ಯಾವುದೇ ಕಷ್ಟವಿಲ್ಲದೆ ನಿರಂತರವಾಗಿ ಪ್ರಯಾಣ ಮಾಡಲು ಅವನಿಗೆ ಸಾಧ್ಯವಾಗುತ್ತದೆ."
  5. ಇಬ್ನ್ ಹಜರ್ ಹೇಳಿದರು: "ಧರ್ಮಶಾಸ್ತ್ರವು ನೀಡಿದ ರಿಯಾಯಿತಿಯನ್ನು ಸ್ವೀಕರಿಸಲು ಈ ಹದೀಸಿನಲ್ಲಿ ಸೂಚನೆಯಿದೆ. ಏಕೆಂದರೆ, ರಿಯಾಯಿತಿಯಿರುವ ವಿಷಯಗಳಲ್ಲಿ ಕಠೋರ ನಿರ್ಧಾರ ತೆಗೆದುಕೊಳ್ಳುವುದು ಮಿತತ್ವವಲ್ಲ. ಉದಾಹರಣೆಗೆ, ನೀರನ್ನು ಬಳಸಲು ಅಶಕ್ತನಾಗಿರುವ ವ್ಯಕ್ತಿ ತಯಮ್ಮುಮ್ ಮಾಡುವುದನ್ನು ಬಿಟ್ಟು ನೀರನ್ನೇ ಬಳಸಲು ನಿರ್ಧರಿಸಿದರೆ ಅದರಿಂದ ಅವನು ತೊಂದರೆ ಅನುಭವಿಸಬೇಕಾಗುತ್ತದೆ."
  6. ಇಬ್ನುಲ್ ಮುನೀರ್ ಹೇಳಿದರು: "ಈ ಹದೀಸ್‌ನಲ್ಲಿ ಪ್ರವಾದಿತ್ವದ ಚಿಹ್ನೆಗಳಲ್ಲಿ ಒಳಪಟ್ಟ ಒಂದು ಚಿಹ್ನೆಯಿದೆ. ಏಕೆಂದರೆ, ನಾವು ತಿಳಿದಿರುವಂತೆ ಮತ್ತು ನಮಗಿಂತ ಮೊದಲಿನವರು ತಿಳಿದಿರುವಂತೆ ಧಾರ್ಮಿಕ ವಿಷಯಗಳಲ್ಲಿ ಉಗ್ರ ನಿಲುವನ್ನು ಹೊಂದಿರುವವರು ವಿಫಲರಾಗುತ್ತಾರೆ. ಇದರ ಉದ್ದೇಶ ಪೂರ್ಣ ರೂಪದಲ್ಲಿ ಆರಾಧನೆ ಮಾಡಲು ಪ್ರಯತ್ನಿಸುವುದನ್ನು ತಡೆಯುವುದಲ್ಲ. ಅದು ಪ್ರಶಂಸಾರ್ಹ ಕಾರ್ಯವಾಗಿದೆ. ಬದಲಿಗೆ, ಇದರ ಉದ್ದೇಶವು ಆಯಾಸಕ್ಕೆ ಕಾರಣವಾಗುವ ಅತಿರೇಕವನ್ನು, ಅಥವಾ ಶ್ರೇಷ್ಠ ಕರ್ಮಗಳನ್ನು ಬಿಟ್ಟುಬಿಡಲು ಕಾರಣವಾಗುವ ರೀತಿಯಲ್ಲಿ ಐಚ್ಛಿಕ ಕರ್ಮಗಳಲ್ಲಿ ಉತ್ಪ್ರೇಕ್ಷೆ ತೋರುವುದನ್ನು, ಅಥವಾ ಕಡ್ಡಾಯ ಕರ್ಮಗಳನ್ನು ಅದರ ಸಮಯದ ಹೊರಗೆ ನಿರ್ವಹಿಸುವಂತಾಗುವುದನ್ನು ತಡೆಯುವುದಾಗಿದೆ. ಉದಾಹರಣೆಗೆ ಒಬ್ಬ ವ್ಯಕ್ತಿ ರಾತ್ರಿಯಿಡೀ ನಮಾಝ್ ಮಾಡುತ್ತಾನೆ. ನಂತರ ಫಜ್ರ್ ನಮಾಝಿನ ಜಮಾಅತ್ ನಡೆಯುವ ಸಮಯದಲ್ಲಿ ನಿದ್ದೆ ಮಾಡಿ, ಅಥವಾ ಸೂರ್ಯೋದಯದ ತನಕ ನಿದ್ದೆ ಮಾಡಿ ಫಜ್ರ್ ನಮಾಝನ್ನು ಅದರ ಸಮಯ ಮುಗಿದ ಬಳಿಕ ನಿರ್ವಹಿಸುತ್ತಾನೆ."