/ ತನಗಾಗಿ ಇಷ್ಟಪಡುವುದನ್ನು ತನ್ನ ಸಹೋದರನಿಗಾಗಿಯೂ ಇಷ್ಟಪಡುವ ತನಕ ನಿಮ್ಮಲ್ಲಿ ಯಾರೂ (ನಿಜವಾದ) ಸತ್ಯವಿಶ್ವಾಸಿಯಾಗುವುದಿಲ್ಲ...

ತನಗಾಗಿ ಇಷ್ಟಪಡುವುದನ್ನು ತನ್ನ ಸಹೋದರನಿಗಾಗಿಯೂ ಇಷ್ಟಪಡುವ ತನಕ ನಿಮ್ಮಲ್ಲಿ ಯಾರೂ (ನಿಜವಾದ) ಸತ್ಯವಿಶ್ವಾಸಿಯಾಗುವುದಿಲ್ಲ...

ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ತನಗಾಗಿ ಇಷ್ಟಪಡುವುದನ್ನು ತನ್ನ ಸಹೋದರನಿಗಾಗಿಯೂ ಇಷ್ಟಪಡುವ ತನಕ ನಿಮ್ಮಲ್ಲಿ ಯಾರೂ (ನಿಜವಾದ) ಸತ್ಯವಿಶ್ವಾಸಿಯಾಗುವುದಿಲ್ಲ."
متفق عليه

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಯಾವುದೇ ಒಬ್ಬ ಮುಸಲ್ಮಾನನು ಧಾರ್ಮಿಕ ಮತ್ತು ಲೌಕಿಕ ವಿಷಯಗಳಲ್ಲಿ ತನಗಾಗಿ ಇಷ್ಟಪಡುವ ಸತ್ಕಾರ್ಯಗಳು ಮತ್ತು ಇತರೆಲ್ಲಾ ಒಳಿತುಗಳನ್ನು ತನ್ನ ಸಹೋದರನಿಗಾಗಿಯೂ ಇಷ್ಟಪಡುವ ತನಕ ಮತ್ತು ತನ್ನ ವಿಷಯದಲ್ಲಿ ದ್ವೇಷಿಸುವುದೆಲ್ಲವನ್ನೂ ತನ್ನ ಸಹೋದರನಿಗಾಗಿಯೂ ದ್ವೇಷಿಸುವ ತನಕ ನಿಜವಾದ ಮತ್ತು ಪೂರ್ಣ ರೂಪದ ಸತ್ಯವಿಶ್ವಾಸಿಯಾಗುವುದಿಲ್ಲ. ತನ್ನ ಸಹೋದರನಲ್ಲಿ ಧಾರ್ಮಿಕವಾದ ಯಾವುದಾದರೂ ಕೊರತೆಯನ್ನು ಕಂಡರೆ ಅವನು ಅದನ್ನು ಸರಿಪಡಿಸಲು ಪರಿಶ್ರಮಿಸುತ್ತಾನೆ. ಅವನಲ್ಲಿ ಏನಾದರೂ ಒಳಿತನ್ನು ಕಂಡರೆ ಅವನನ್ನು ಬೆಂಬಲಿಸುತ್ತಾನೆ ಮತ್ತು ಸಹಾಯ ಮಾಡುತ್ತಾನೆ. ಅವನ ಧಾರ್ಮಿಕ ಅಥವಾ ಲೌಕಿಕ ವಿಷಯಗಳಲ್ಲಿ ಅವನಿಗೆ ಸಲಹೆಗಳನ್ನು ನೀಡುತ್ತಾನೆ.

Hadeeth benefits

  1. ಮನುಷ್ಯನು ತನಗಾಗಿ ಇಷ್ಟಪಡುವುದನ್ನು ತನ್ನ ಸಹೋದರನಿಗಾಗಿಯೂ ಇಷ್ಟಪಡುವುದು ಕಡ್ಡಾಯವಾಗಿದೆ. ಏಕೆಂದರೆ, ತನಗಾಗಿ ಇಷ್ಟಪಡುವುದನ್ನು ತನ್ನ ಸಹೋದರನಿಗೂ ಇಷ್ಟಪಡದ ವ್ಯಕ್ತಿ ಸತ್ಯವಿಶ್ವಾಸಿಯಲ್ಲ ಎಂದು ಹೇಳಿರುವುದು ಅದು ಕಡ್ಡಾಯವೆಂಬುದಕ್ಕೆ ಸೂಚನೆಯಾಗಿದೆ.
  2. ಅಲ್ಲಾಹನಿಗಾಗಿರುವ ಸಹೋದರತ್ವವು ಜೈವಿಕ ಸಹೋದರತ್ವಕ್ಕಿಂತಲೂ ಉಚ್ಛ ಸ್ಥಾನದಲ್ಲಿರುವುದರಿಂದ, ಅದರ ಹಕ್ಕನ್ನು ನೆರವೇರಿಸುವುದು ಹೆಚ್ಚು ಕಡ್ಡಾಯವಾಗಿದೆ.
  3. ಈ ಪ್ರೀತಿಯನ್ನು ನಿಷೇಧಿಸುವ ಎಲ್ಲಾ ಮಾತು ಮತ್ತು ಕ್ರಿಯೆಗಳು ಕೂಡ ನಿಷಿದ್ಧವಾಗಿವೆ. ಉದಾಹರಣೆಗೆ, ಮೋಸ ಮಾಡುವುದು, ಪರದೂಷಣೆ ಮಾಡುವುದು, ಅಸೂಯೆ ಪಡುವುದು, ಮುಸಲ್ಮಾನರ ಜೀವ, ಸೊತ್ತು ಅಥವಾ ಘನತೆಯ ಮೇಲೆ ಆಕ್ರಮಣ ಮಾಡುವುದು ಇತ್ಯಾದಿ.
  4. ಪ್ರೇರಣೆ ನೀಡುವ ಕೆಲವು ಪದಗಳನ್ನು ಬಳಸಬೇಕೆಂದು ತಿಳಿಸಲಾಗಿದೆ. ಇಲ್ಲಿ "ತನ್ನ ಸಹೋದರನಿಗೆ" ಎಂದು ಹೇಳಿರುವಂತೆ.
  5. ಕರ್ಮಾನಿ (ಅಲ್ಲಾಹು ಅವರಿಗೆ ದಯೆ ತೋರಲಿ) ಹೇಳಿದರು: "ಅದೇ ರೀತಿ ತನಗಾಗಿ ದ್ವೇಷಿಸುವ ಕೆಡುಕುಗಳನ್ನು ತನ್ನ ಸಹೋದರನಿಗಾಗಿಯೂ ದ್ವೇಷಿಸುವುದು ಸತ್ಯವಿಶ್ವಾಸದಲ್ಲಿ ಒಳಪಡುತ್ತದೆ. ಇಲ್ಲಿ ಅದರ ಬಗ್ಗೆ ತಿಳಿಸಲಾಗಿಲ್ಲ. ಏಕೆಂದರೆ, ಒಂದು ವಸ್ತುವನ್ನು ಪ್ರೀತಿಸುವಾಗ ಅದಕ್ಕೆ ವಿರುದ್ಧವಾದುದನ್ನು ದ್ವೇಷಿಸುವುದು ಅನಿವಾರ್ಯವಾಗುತ್ತದೆ. ಆದ್ದರಿಂದ, ಇದನ್ನು ಹೇಳುವ ಅಗತ್ಯವಿಲ್ಲದ್ದರಿಂದ ಹೇಳಲಾಗಿಲ್ಲ."