- ಸತ್ಯವಂತಿಕೆಯು ಒಂದು ಉದಾರ ಗುಣವಾಗಿದ್ದು ಸತತ ಪರಿಶ್ರಮದಿಂದ ಅದನ್ನು ಪಡೆಯಲು ಸಾಧ್ಯವಿದೆ. ಒಬ್ಬ ಮನುಷ್ಯನು ಸತ್ಯ ಹೇಳುತ್ತಲೇ ಇದ್ದರೆ ಮತ್ತು ಅದಕ್ಕಾಗಿ ಪರಿಶ್ರಮಿಸುತ್ತಲೇ ಇದ್ದರೆ ಸತ್ಯವು ಅವನ ನಡವಳಿಕೆ ಮತ್ತು ಸ್ವಭಾವದ ಒಂದು ಭಾಗವಾಗಿ ಮಾರ್ಪಡುತ್ತದೆ. ಆಗ ಅವನನ್ನು ಅಲ್ಲಾಹನ ಬಳಿ ಸತ್ಯವಂತರಲ್ಲಿ ಮತ್ತು ನೀತಿವಂತರಲ್ಲಿ ದಾಖಲಿಸಲಾಗುತ್ತದೆ.
- ಸುಳ್ಳು ಒಂದು ಖಂಡನೀಯ ಗುಣವಾಗಿದ್ದು ಮನುಷ್ಯನು ದೀರ್ಘ ಅಭ್ಯಾಸದಿಂದ ಅದನ್ನು ಪಡೆಯುತ್ತಾನೆ ಮತ್ತು ಅದು ಅವನ ನಡವಳಿಕೆ ಹಾಗೂ ಸ್ವಭಾವದ ಒಂದು ಭಾಗವಾಗುವ ತನಕ ಮಾತಿನಲ್ಲೂ, ಕ್ರಿಯೆಯಲ್ಲೂ ಅದಕ್ಕಾಗಿ ಪರಿಶ್ರಮಿಸುತ್ತಾನೆ. ನಂತರ ಅವನನ್ನು ಅಲ್ಲಾಹನ ಬಳಿ ಸುಳ್ಳುಗಾರರಲ್ಲಿ ದಾಖಲಿಸಲಾಗುತ್ತದೆ.
- ಸತ್ಯವಂತಿಕೆ ಎಂಬ ಪದವನ್ನು ನಾಲಿಗೆಯ ಸತ್ಯವಂತಿಕೆಯನ್ನು ಸೂಚಿಸಲು ಬಳಸಲಾಗುತ್ತದೆ. ಇದು ಸುಳ್ಳಿನ ವಿರುದ್ಧ ಪದವಾಗಿದೆ. ಉದ್ದೇಶದಲ್ಲಿರುವ ಸತ್ಯವಂತಿಕೆಯನ್ನು ಅಂದರೆ ನಿಷ್ಕಳಂಕತೆಯನ್ನು ಸೂಚಿಸಲು ಕೂಡ ಅದನ್ನು ಬಳಸಲಾಗುತ್ತದೆ. ಉದ್ದೇಶಿತ ಒಳಿತನ್ನು ಸಾಧಿಸಲು ದೃಢ ನಿರ್ಧಾರ ತಳೆಯುವುದರಲ್ಲಿರುವ ಸತ್ಯವಂತಿಕೆಯನ್ನು ಸೂಚಿಸಲು ಕೂಡ ಇದನ್ನು ಬಳಸಲಾಗುತ್ತದೆ. ಹಾಗೆಯೇ ಕರ್ಮಗಳಲ್ಲಿರುವ ಸತ್ಯವಂತಿಕೆಯನ್ನು ಸೂಚಿಸಲು ಕೂಡ ಇದನ್ನು ಬಳಸಲಾಗುತ್ತದೆ. ವೈಯಕ್ತಿಕ ಮತ್ತು ಸಾರ್ವಜನಿಕ ಜೀವನವು ಒಂದೇ ರೀತಿಯಲ್ಲಿರುವುದು ಇದರ ಕನಿಷ್ಠ ರೂಪವಾಗಿದೆ. ಭಯ, ನಿರೀಕ್ಷೆ ಮುಂತಾದ ವಿಭಿನ್ನ ಪರಿಸ್ಥಿತಿಗಳಲ್ಲಿರುವ ಸತ್ಯವಂತಿಕೆಯನ್ನು ಸೂಚಿಸಲು ಕೂಡ ಇದನ್ನು ಬಳಸಲಾಗುತ್ತದೆ. ಇವುಗಳನ್ನು ಪೂರ್ಣವಾಗಿ ಅಳವಡಿಸಿಕೊಳ್ಳುವವರು ಅತ್ಯಂತ ಸತ್ಯವಂತರು (ಸಿದ್ದೀಕ್) ಮತ್ತು ಇವುಗಳಲ್ಲಿ ಕೆಲವನ್ನು ಅಳವಡಿಸಿಕೊಳ್ಳುವವರು ಸತ್ಯವಂತರು (ಸಾದಿಕ್) ಎಂದು ಕರೆಸಿಕೊಳ್ಳುತ್ತಾರೆ.