/ ಎಚ್ಚರಾ! ಒರಗು ಕುರ್ಚಿಯಲ್ಲಿ ಕುಳಿತಿರುವ ಒಬ್ಬ ವ್ಯಕ್ತಿಗೆ ನಾನು ಹೇಳಿದ ಒಂದು ಹದೀಸ್ ತಲುಪುತ್ತದೆ. ಆಗ ಅವನು ಹೇಳುತ್ತಾನೆ: ನಮ್ಮ ಬಳಿ ಅಲ್ಲಾಹನ ಗ್ರಂಥವಿದೆ...

ಎಚ್ಚರಾ! ಒರಗು ಕುರ್ಚಿಯಲ್ಲಿ ಕುಳಿತಿರುವ ಒಬ್ಬ ವ್ಯಕ್ತಿಗೆ ನಾನು ಹೇಳಿದ ಒಂದು ಹದೀಸ್ ತಲುಪುತ್ತದೆ. ಆಗ ಅವನು ಹೇಳುತ್ತಾನೆ: ನಮ್ಮ ಬಳಿ ಅಲ್ಲಾಹನ ಗ್ರಂಥವಿದೆ...

ಮಿಕ್ದಾಮ್ ಬಿನ್ ಮಅದೀ ಕರಿಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಎಚ್ಚರಾ! ಒರಗು ಕುರ್ಚಿಯಲ್ಲಿ ಕುಳಿತಿರುವ ಒಬ್ಬ ವ್ಯಕ್ತಿಗೆ ನಾನು ಹೇಳಿದ ಒಂದು ಹದೀಸ್ ತಲುಪುತ್ತದೆ. ಆಗ ಅವನು ಹೇಳುತ್ತಾನೆ: ನಮ್ಮ ಬಳಿ ಅಲ್ಲಾಹನ ಗ್ರಂಥವಿದೆ. ಅದರಲ್ಲಿ ಏನು ಅನುಮತಿಸಲಾಗಿದೆಯೆಂದು ನಾವು ಕಾಣುತ್ತೇವೆಯೋ ಅದನ್ನು ನಾವು ಧರ್ಮಸಮ್ಮತವೆಂದು ಪರಿಗಣಿಸುತ್ತೇವೆ., ಅದರಲ್ಲಿ ಏನು ನಿಷೇಧಿಸಲಾಗಿದೆಯೆಂದು ನಾವು ಕಾಣುತ್ತೇವೆಯೋ, ಅದನ್ನು ನಾವು ಧರ್ಮನಿಷಿದ್ಧವೆಂದು ಪರಿಗಣಿಸುತ್ತೇವೆ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಷೇಧಿಸಿದ್ದೆಲ್ಲವೂ ಅಲ್ಲಾಹು ನಿಷೇಧಿಸಿದಂತೆಯೇ ಆಗಿದೆ."
رواه أبو داود والترمذي وابن ماجه

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಸಮೀಪದಲ್ಲಿ ಒಂದು ಕಾಲವು ಬರಲಿದೆ. ಆಗ ಜನರಲ್ಲಿ ಒಬ್ಬನು ಆರಾಮಕುರ್ಚಿಯಲ್ಲಿ ಒರಗಿಕೊಂಡಿರುತ್ತಾನೆ. ನನ್ನ ಒಂದು ಹದೀಸನ್ನು ಅವನ ಮುಂದೆ ಪಠಿಸಲಾಗುತ್ತದೆ. ಆಗ ಅವನು ಹೇಳುತ್ತಾನೆ: ನಮ್ಮ ವಿಷಯದಲ್ಲಿ ಪವಿತ್ರ ಕುರ್‌ಆನ್ ತೀರ್ಪು ನೀಡುತ್ತದೆ. ಅದು ನಮಗೆ ಯಥೇಷ್ಟ ಸಾಕು. ಅದರಲ್ಲಿ ಏನು ಅನುಮತಿಸಲಾಗಿದೆಯೆಂದು ನಾವು ಕಾಣುತ್ತೇವೆಯೋ, ಅದನ್ನು ನಾವು ಸ್ವೀಕರಿಸುತ್ತೇವೆ. ಅದರಲ್ಲಿ ಏನು ನಿಷೇಧಿಸಲಾಗಿದೆಯೆಂದು ನಾವು ಕಾಣುತ್ತೇವೆಯೋ, ಅದನ್ನು ನಾವು ತಿರಸ್ಕರಿಸುತ್ತೇವೆ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸುನ್ನತ್‌ನಲ್ಲಿ (ಹದೀಸ್‌ನಲ್ಲಿ) ನಿಷೇಧಿಸಲಾಗಿರುವ ಅಥವಾ ವಿರೋಧಿಸಲಾಗಿರುವ ವಿಷಯಗಳೆಲ್ಲವೂ ಪವಿತ್ರ ಕುರ್‌ಆನಿನಲ್ಲಿ ಅಲ್ಲಾಹು ನಿಷೇಧಿಸಿರುವ ವಿಷಯಗಳ ಅದೇ ನಿಯಮವನ್ನು ಹೊಂದಿವೆ ಎಂದು ತಿಳಿಸುತ್ತಾರೆ. ಏಕೆಂದರೆ ಅವರು ಅಲ್ಲಾಹನ ಸಂದೇಶವನ್ನು ಜನರಿಗೆ ತಲುಪಿಸಿಕೊಡುವವರು.

Hadeeth benefits

  1. ಕುರ್‌ಆನನ್ನು ಗೌರವಿಸುವಂತೆಯೇ ಸುನ್ನತ್ತನ್ನು ಗೌರವಿಸಬೇಕು ಮತ್ತು ಅದನ್ನು ಸ್ವೀಕರಿಸಬೇಕೆಂದು ಈ ಹದೀಸ್ ತಿಳಿಸುತ್ತದೆ.
  2. ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅನುಸರಿಸುವುದು ಎಂದರೆ ಅಲ್ಲಾಹನನ್ನು ಅನುಸರಿಸುವುದಾಗಿದೆ ಮತ್ತು ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅನುಸರಿಸದಿರುವುದು ಅಲ್ಲಾಹನನ್ನು ಅನುಸರಿಸದಿರುವುದಾಗಿದೆ.
  3. ಈ ಹದೀಸ್ ಸುನ್ನತ್ (ಪ್ರವಾದಿಚರ್ಯೆ) ಧಾರ್ಮಿಕ ನಿಯಮಗಳಿಗೆ ಪುರಾವೆಯಾಗಿದೆಯೆಂದು ಸಾಬೀತುಪಡಿಸುತ್ತದೆ ಮತ್ತು ಅದನ್ನು ತಿರಸ್ಕರಿಸುವವರಿಗೆ ಅಥವಾ ನಿಷೇಧಿಸುವವರಿಗೆ ಉತ್ತರ ನೀಡುತ್ತದೆ.
  4. ಸುನ್ನತ್ತನ್ನು ನಿರ್ಲಕ್ಷಿಸಿ ಕುರ್‌ಆನ್ ಮಾತ್ರ ಸಾಕು ಎಂದು ವಾದಿಸುವವನು ಅವೆರಡನ್ನೂ ನಿರ್ಲಕ್ಷಿಸುವವನಾಗಿದ್ದಾನೆ ಮತ್ತು ತಾನು ಕುರ್‌ಆನನ್ನು ಹಿಂಬಾಲಿಸುತ್ತೇನೆಂದು ಅವನು ಹೇಳುವುದು ಸುಳ್ಳಾಗಿದೆ ಎಂದು ಈ ಹದೀಸ್ ತಿಳಿಸುತ್ತದೆ.
  5. ಭವಿಷ್ಯದಲ್ಲಿ ಸಂಭವಿಸುವ ಒಂದು ಸಂಗತಿಯ ಬಗ್ಗೆ ಭವಿಷ್ಯ ನುಡಿದಿದ್ದು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರವಾದಿತ್ವಕ್ಕೆ ಒಂದು ಪುರಾವೆಯಾಗಿದೆ. ಇದು ಅವರು ನುಡಿದಂತೆಯೇ ನಡೆದಿದೆ.